ಬೆಂಗಳೂರು,ಜು.17- ಗವಿಗಂಗಾಧರ ದೇಗುಲದಲ್ಲಿ ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾರುದ್ರ ಯಾಗ ನೆರವೇರಿಸಿದರು.
ಗವಿಗಂಗಾದರೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ಅವರು ಮಹಾರುದ್ರ ಯಾಗ ಮಾಡಿಸಿ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಲಿ ಎಂಬ ಸಂಕಲ್ಪದೊಂದಿಗೆ ಯಾಗದಲ್ಲಿ ತೊಡಗಿಕೊಂಡರು.
ಚಂದ್ರಗ್ರಹಣ ಮೋಕ್ಷ ಕಾಲದಲ್ಲಿ ಗವಿಗಂಗಾಧರ ದೇಗುಲದಲ್ಲಿ ದೇಗುಲ ಪ್ರಕಾರ ಶುದ್ಧಿಗೊಳಿಸಿದ ನಂತರ ಇಡೀ ದೇಗುಲವನ್ನು ಶುಚಿಗೊಳಿಸಲಾಯಿತು.
ಯಡಿಯೂರಪ್ಪನವರ ಪುತ್ರಿ ಪದ್ಮಾವತಿ, ಸೊಸೆ ಪ್ರೇಮ, ಮೊಮ್ಮಗ, ಇತರ ಕುಟುಂಬ ಸದಸ್ಯರು ಸೇರಿದಂತೆ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕ ರವಿಸುಬ್ರಮಣ್ಯ ಯಾಗದಲ್ಲಿ ಪಾಲ್ಗೊಂಡಿದ್ದರು.
ದೇಗುಲದ ಸಹಾಯಕ ಅರ್ಚಕ ಶ್ರೀಕಂಠ ದೀಕ್ಷಿತ್ ಮಾತನಾಡಿ, ಗ್ರಹಣ ಶಾಂತಿ, ರಾಜಕೀಯ ಸಂಕಲ್ಪ ಮಾಡಿಲ್ಲ, ಲೋಕಕಲ್ಯಾಣ ಎಂದಿದ್ದಾರೆ. ಅದಕ್ಕೆ ಸಿದ್ದತೆ ಮಾಡಿದ್ದೇವೆ ಎಂದು ಹೇಳಿದರು.
ಮಹಾಯಾಗದಿಂದ ಶಿವನು ಅಘೋರ ತತ್ವ ಸಂಹಾರ ಮಾಡಿ, ಶಾಂತಿ ತತ್ವ ಅನುಗ್ರಹ ಮಾಡುತ್ತಾನೆ ಎಂದು ಯಾಗದ ಮಹತ್ವ ತಿಳಿಸಿರುವ ಅವರು, ಈ ಸಂದರ್ಭದಲ್ಲಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ವಿವರಿಸಿದರು.
ಈ ಯಾಗದಿಂದ ಅಂದುಕೊಂಡಿರುವುದನ್ನು ಸಾಧಿಸಬಹುದು. ಅಧಿಕಾರ ಪ್ರಾಪ್ತಿಯ ಬಗ್ಗೆ ಅವರು ಅಂದುಕೊಂಡರೆ ಅದು ಕೂಡ ನೆರವೇರಲಿದೆ. ಲೋಕಕಲ್ಯಾಣದ ಕಾರಣದ ಜೊತೆಗೆ ಅವರ ಮನಸ್ಸಿನ ಇಷ್ಟಾರ್ಥ ನೆರವೇರಿಕೆಗಾಗಿ ಈ ಮಹಾ ರುದ್ರಯಾಗ ಮಾಡಿಸಿದ್ದಾರೆಎಂದು ತಿಳಿಸಿದರು.