ಶಾಸಕರಿಗೆ ನೀತಿ ಪಾಠ ಹೇಳಿದ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜು.17-ಅತೃಪ್ತ ಶಾಸಕರ ಕುರಿತಂತೆ ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆ ರೆಸಾರ್ಟ್‍ನಲ್ಲಿದ್ದ ಬಿಜೆಪಿಯ ಶಾಸಕರ ಸಂತಸಕ್ಕೆ ಪಾರವೇ ಇರಲಿಲ್ಲ.

ನ್ಯಾಯಾಲಯ ಏನು ತೀರ್ಪು ನೀಡಬಹುದೆಂದು ಚಾತಕ ಪಕ್ಷಿಯಂತೆ ಟಿವಿ ವಾಹಿನಿಗಳ ಮುಂದೆ ಕುಳಿತಿದ್ದ ಬಹುತೇಕ ಮುಖಂಡರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್‍ಗೊಗಾಯ್ ನೇತೃತ್ವದ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸುತ್ತಿದ್ದಂತೆ ಶಾಸಕರೆಲ್ಲರೂ ಕುಣಿದು ಕುಪ್ಪಳಿಸಿದರು.

ಯಲಹಂಕ ಸಮೀಪದ ರಮಡ ರೆಸಾರ್ಟ್‍ನಲ್ಲಿ ಕಳೆದ ನಾಲ್ಕು ದಿನಗಳಿಂದ ವಾಸ್ತವ್ಯ ಹೂಡಿರುವ ಶಾಸಕರು ಸುಪ್ರೀಂಕೋರ್ಟ್ ಅತೃಪ್ತರಿಗೆ ರಿಲೀಫ್ ನೀಡುವಂತಹ ಆದೇಶವನ್ನು ನೀಡುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದರು.

ಸರ್.ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ಶಾಸಕ ರಘು ಅವರು ಎಲ್ಲಾ ಶಾಸಕರಿಗೆ ಸಿಹಿ ಹಂಚಿದರೆ ಇನ್ನು ಕೆಲವು ಶಾಸಕರು ಕುಣಿದು ಕುಪ್ಪಳಿಸಿದರೆಂದು ತಿಳಿದುಬಂದಿದೆ.

ಕಳೆದ ಬಾರಿ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿದ್ದರಿಂದ ನಾವು ಅಧಿಕಾರ ಕಳೆದುಕೊಂಡಿದ್ದೆವು. ಈ ಬಾರಿ ನ್ಯಾಯಾಲಯ ರಾಜೀನಾಮೆ ನೀಡಿರುವ ಶಾಸಕರನ್ನು ಸದನಕ್ಕೆ ಬಲವಂತವಾಗಿ ಹಾಜರಾಗುವಂತೆ ಹೇಳುವಂತೆಯೂ ಇಲ್ಲ. ಅವರಿಗೆ ವಿಪ್ ಜಾರಿ ಮಾಡುವಂತಿಲ್ಲ ಎಂದು ಹೇಳಿರುವುದು ಸರ್ಕಾರ ರಚನೆಗೆ ನಮ್ಮ ದಾರಿ ಸುಗಮವಾಗಿದೆ ಎಂದು ಬಹುತೇಕರು ಸಂತಸ ಹಂಚಿಕೊಂಡರು.

ತೀರ್ಪು ಶಾಸಕರ ಪರವಾಗಿಯೇ ಬರಲಿದೆ ಎಂಬ ನಂಬಿಕೆ ಇತ್ತು. ಏಕೆಂದರೆ ಅವರ ಪರ ವಕೀಲ ಮುಕುಲ್ ರೋಹ್ಟಗಿ ಸಮರ್ಥವಾಗಿ ವಾದ ಮಂಡಿಸಿದ್ದರು. ನಮಗೆ ನ್ಯಾಯ ಸಿಗುವ ವಿಶ್ವಾಸವಿತ್ತು. ಅತೃಪ್ತರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ನೀಡಿರುವ ತೀರ್ಪು ಬಿಜೆಪಿ ಸರ್ಕಾರ ರಚನೆಗೆ ಎದುರಾಗಿದ್ದ ಅಡ್ಡಿಯನ್ನು ನಿವಾರಣೆ ಮಾಡಿದೆ ಎಂದು ಪ್ರಮುಖರೊಬ್ಬರು ತಿಳಿಸಿದರು.

ಇನ್ನು ತೀರ್ಪು ಪ್ರಕಟವಾಗುತ್ತಿದ್ದಂತೆ ಅತೀವ ಸಂತಸದಲ್ಲಿದ್ದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಧ್ಯಾಹ್ನ ರೆಸಾರ್ಟ್‍ನಲ್ಲಿ ಶಾಸಕರಿಗೆ ನೀತಿ ಪಾಠ ಮಾಡಿದ್ದಾರೆ. 103 ಮಂದಿ ಶಾಸಕರು ಹಾಗೂ ಪ್ರಮುಖರ ಜೊತೆ ಸಭೆ ನಡೆಸಿದ ಅವರು, ವಿಶ್ವಾಸ ನಿರ್ಣಯ ಮಂಡಿಸುವ ವೇಳೆ ಸದನದಲ್ಲಿ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ.

ಈ ಬಾರಿ ನಾವು ಸರ್ಕಾರ ರಚನೆ ಮಾಡುವುದು ನೂರಕ್ಕೆ 100ರಷ್ಟು ಖಚಿತ. ರಾಜ್ಯದ ಜನತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಮತ ನೀಡಿದ್ದರೂ ಪೂರ್ಣ ಪ್ರಮಾಣದಲ್ಲಿ ಬಹುಮತ ನೀಡಿರಲಿಲ್ಲ. ನ್ಯಾಯಾಲಯ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಆದೇಶ ನೀಡಿದ್ದರಿಂದ ನಾವು ಸರ್ಕಾರವನ್ನು ಕಳೆದುಕೊಂಡೆವು. ಈ ಬಾರಿ ಸರ್ಕಾರ ರಚನೆ ಮಾಡುವ ಅವಕಾಶ ಸಿಕ್ಕಿದೆ. ಜನಪರವಾದ ಆಡಳಿತ ನೀಡುವ ಮೂಲಕ ಉತ್ತಮ ಕೆಲಸ ಮಾಡಲು ಎಲ್ಲರೂ ತಮ್ಮೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಸದನದಲ್ಲಿ ಆಡಳಿತ ಪಕ್ಷದವರು ನಿಮ್ಮನ್ನು ಅನಗತ್ಯವಾಗಿ ಪ್ರಚೋದಿಸಬಹುದು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಸೇರಿದಂತೆ ನಮ್ಮ ಮೇಲೆ ಆರೋಪ ಮಾಡಬಹುದು. ನೀವು ಸಹನೆ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಿ.

ಒಂದು ವೇಳೆ ನೀವು ಪ್ರತಿ ದಾಳಿ ಮಾಡಲು ಮುಂದಾದರೆ ನಿಮ್ಮನ್ನು ದುರ್ನಡತೆ ಆಧಾರದ ಮೇಲೆ ಸದನದಿಂದ ಅಮಾನತು ಮಾಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಒಂದೊಂದು ಸಂಖ್ಯೆಯೂ ಪ್ರಮುಖವಾಗಿರುವುದರಿಂದ ಎಚ್ಚರಿಕೆಯಿಂದ ವರ್ತಿಸಬೇಕೆಂದು ಯಡಿಯೂರಪ್ಪ ಎಲ್ಲಾ ಶಾಸಕರಿಗೂ ಕಿವಿಮಾತು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ