ಅಸ್ಸಾಂನಲ್ಲಿ ಬ್ರಹ್ಮಪುತ್ರಾ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿರುವುದರಿಂದ ಹಲವು ಹೊಸ ಪ್ರದೇಶಗಳು ಜಲಾವೃತಗೊಂಡಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಅಸ್ಸಾಂ ರಾಜ್ಯದ 28 ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ಗಂಭೀರವಾಗಿದ್ದು, 26 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಬಾರ್ಪೇಟಾ, ಮೋರಿಗಾಂವ್ ಹಾಗೂ ದುಬ್ರಿ ಜಿಲ್ಲೆಗಳು ಪ್ರವಾಹ ಪರಿಸ್ಥಿತಿಗೆ ತೀವ್ರವಾಗಿ ನಲುಗಿವೆ. ಸ್ಥಳಾಂತರಗೊಂಡ ಜನರಿಗಾಗಿ ವಿವಿಧ ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಮಿಜೋರಾಂನಲ್ಲಿ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ನೆರೆ ಉಂಟಾಗಿದೆ. 6 ಮಂದಿ ಮೃತಪಟ್ಟಿದ್ದಾರೆ. 1 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕಳೆದ 7 ದಿನಗಳಿಂದ ಮೇಘಾಲಯದೆಲ್ಲೆಡೆ ನಿರಂತರ ಮಳೆ ಸುರಿಯುತ್ತಿದ್ದು, 2 ನದಿಗಳಲ್ಲಿ ಪ್ರವಾಹ ಉಂಟಾಗಿ, ಪಶ್ಚಿಮ ಗ್ಯಾರೋ ಹಿಲ್ಸ್ ಜಿಲ್ಲೆಯ ಪ್ರದೇಶಗಳಲ್ಲೂ ನೆರೆ ಪರಿಸ್ಥಿತಿ ಉಂಟಾಗಿದೆ. 1 ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದಲ್ಲೂ ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ತೀವ್ರ ಬಾಧಿತ 10 ಜಿಲ್ಲೆಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಜನರು ನೆರೆ ಸಮಸ್ಯೆ ಎದುರಿಸುತ್ತಿದ್ದಾರೆ. ಸೀತಾಮಡಿ, ಶಿಯೋಹರ್, ಮಧುಬನಿ, ಅರಾರಿಯಾ ಮತ್ತು ಕಿಶನ್ಗಂಜ್ ಜಿಲ್ಲೆಗಳಲ್ಲಿ ತೀವ್ರ ಪ್ರವಾಹದಿಂದಾಗಿ ಹೆಚ್ಚು ತೊಂದರೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಪ್ರವಾಹದಿಂದ ಸಾವಿಗೀಡಾದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ.
ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸತತ 2ನೇ ದಿನವಾದ ಇಂದೂ ಸಹ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಅರಾರಿಯಾ, ಕಿಶನ್ಗಂಜ್, ಪೂರ್ನಿಯಾ, ಕತಿಹಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಾಮರ್ಶಿಸಿದರು. ಸಮೀಕ್ಷೆಯ ನಂತರ ಪೂರ್ನಿಯಾದ ಚುನಾಪುರ್ ವಿಮಾನ ನಿಲ್ದಾಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಪ್ರವಾಹ ಸಂತ್ರಸ್ತ ಜನರಿಗೆ ಸಾಧ್ಯವಿರುವ ಎಲ್ಲಾ ನೆರವುಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಧಿಕಾರಿಗಳಿಗೆ ಸೂಚಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಅಸ್ಸಾಂ ರಾಜ್ಯಕ್ಕೆ ಎಲ್ಲಾ ನೆರವು ಹಾಗೂ ಸಹಕಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರೊಂದಿಗೆ ದೂರವಾಣಯಲ್ಲಿ ಮಾತುಕತೆ ನಡೆಸಿ ಈ ಭರವಸೆ ನೀಡಿದ್ದಾರೆ. ಮಾತುಕತೆಯ ವೇಳೆ ಮುಖ್ಯಮಂತ್ರಿ ಸರ್ಬಾನಂದ್, ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಪರಿಹಾರ, ರಕ್ಷಣೆ ಹಾಗೂ ಪುನವರ್ಸತಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.