ಬೆಂಗಳೂರು: ಮೈತ್ರಿ ಸರ್ಕಾರ ಇಂದು ಕೊನೆಯಾಗುತ್ತಾ ಅಥವಾ ಉಳಿದುಕೊಳ್ಳುತ್ತಾ ಗೊತ್ತಿಲ್ಲ. ಆದರೆ ಇಂದಿನ ವಿಧಾನಸಭೆ ಕಲಾಪ ಮಾತ್ರ ಭಾರೀ ಕುತೂಹಲ ಮೂಡಿಸಿದೆ. ಇಂದು ಸಿಎಂ ವಿಶ್ವಾಸ ಮತಯಾಚನೆ ಮಾಡುತ್ತಾರಾ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಈ ನಡುವೆ ಸಿಎಂ ವಿಶ್ವಾಸ ಮತಯಾಚನೆ ಮಾಡಿದರು, ಮಾಡದಿದ್ದರೂ ಬಿಜೆಪಿ ಮಹಾ ಪ್ಲಾನ್ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಂದು ವೇಳೆ ಸಿಎಂ ವಿಶ್ವಾಸಮತ ಯಾಚನೆಗೆ ಮುಂದಾಗದಿದ್ದಲ್ಲಿ ಇಂದೇ ವಿಶ್ವಾಸ ಮತಯಾಚಿಸಿ ಇಲ್ಲದಿದ್ದರೆ ಕಲಾಪವನ್ನೇ ನಡೆಸಬೇಡಿ ಎಂದು ಒತ್ತಡ ಹೇರಲು ಬಿಜೆಪಿ ಪ್ಲಾನ್ ಮಾಡಿದೆ. ಅಷ್ಟೇ ಅಲ್ಲದೆ ನಿಮ್ಮ ವಿಶ್ವಾಸ ಮತದ ಸವಾಲನ್ನು ಇಂದೇ ಎದುರಿಸಿ ಎಂದು ಬಿಜೆಪಿ ಪ್ರತಿ ಸವಾಲು ಹಾಕಲಿದೆ. ಜೊತೆಗೆ ಸ್ಪೀಕರ್ಗೂ ಇಂದೇ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡುವಂತೆ ಒತ್ತಾಯಿಸಲು ಬಿಜೆಪಿ ಎಲ್ಲ ತಯಾರಿ ಮಾಡಿಕೊಂಡಿದೆ.
ಸಿಎಂ ಇಂದೇ ವಿಶ್ವಾಸ ಮತಯಾಚನೆ ಮಾಡಲು ಮುಂದಾಗಿ ಭಾಷಣ ಮಾಡಿದರೆ ಇದಕ್ಕೂ ಬಿಜೆಪಿ ಪ್ಲಾನ್ ರೆಡಿ ಮಾಡಿದೆ. ಸಿಎಂ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಪಕ್ಷದ ಶಾಸಕರು ಸಿಟ್ಟೇಳುವಂತೆ ಪ್ರಚೋದನಕಾರಿ ಭಾಷಣ ಮಾಡಬಹುದು ಅಥವಾ ಬಿಜೆಪಿಯ ಶಾಸಕರು ಗದ್ದಲ ಎಬ್ಬಿಸುವಂತೆ ಭಾಷಣ ಮಾಡಬಹುದು. ಈ ವೇಳೆ ಧ್ವನಿಮತದ ಮೂಲಕ ವಿಶ್ವಾಸ ಮತ ಪ್ರಸ್ತಾವನೆಗೆ ಅಂಗೀಕಾರ ಪಡೆದುಕೊಳ್ಳುವುದು ಸಿಎಂ ಪ್ಲಾನ್ ಎಂದು ಬಿಜೆಪಿ ಊಹಿಸಿದೆ.
ಇದಕ್ಕೆ ತಕ್ಕ ಪ್ರತಿ ತಂತ್ರವನ್ನೂ ಬಿಜೆಪಿ ಪಾಳಯ ಸಿದ್ಧ ಮಾಡಿಕೊಂಡಿದ್ದು, ಸಿಎಂ ಹೇಗೆ, ಎಷ್ಟೇ ಖಾರವಾಗಿ ಮಾತಾಡಿದರೂ ಬಿಜೆಪಿ ಶಾಸಕರು ಮೌನವಾಗಿಯೇ ಇರುತ್ತಾರಂತೆ. ಸದನದಲ್ಲಿದ್ದೇ ಧ್ವನಿಮತ ಬದಲು ಕೈ ಎತ್ತುವ ಮೂಲಕ ಪ್ರಸ್ತಾವನೆಗೆ ವಿರೋಧಿಸಿ ಸರ್ಕಾರ ಬೀಳಿಸುವುದು ಬಿಜೆಪಿ ಪ್ಲಾನ್ ಆಗಿದೆ. ಸಿಎಂ ವಿಶ್ವಾಸ ಮತ ಯಾಚಿಸದೇ ಕಾರ್ಯಕಲಾಪಗಳಿಗೆ ಹೋದರೆ ಅದಕ್ಕೂ ಬಿಜೆಪಿ ತಂತ್ರ ರೆಡಿ ಮಾಡಿಕೊಂಡಿದ್ದು, ಅಲ್ಪ ಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರ ಸದನ ನಡೆಸಲು ಬಿಡದಿರಲು ಸಹ ಬಿಜೆಪಿ ರಣತಂತ್ರ ಹೆಣೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.