ಶ್ರೀಹರಿಕೋಟ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಉಡಾವಣೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV Mk III (ಜಿಎಸ್ಎಲ್ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿದೆ. ಇದರ ಮೂಲಕ ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಉಡಾವಣೆಗೆ 56 ನಿಮಿಷಗಳಿರುವ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉಡಾವಣೆ ದಿನಾಂಕವನ್ನು ಮುಂದೂಡಲಾಗಿದೆ. ಉಡಾವಣೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ 2 ವಿಶೇಷತೆಗಳೇನು?:
ವಿಶ್ವದ ಯಾವ ರಾಷ್ಟ್ರವೂ ಚಂದ್ರನ ಮತ್ತೊಂದು ಪಾರ್ಶ್ವಮುಖವಾದ ದಕ್ಷಿಣ ಧ್ರುವವವನ್ನು ಅಧ್ಯಯನ ಮಾಡಿಲ್ಲ. ಹಾಗಾಗಿ ಚಂದ್ರಯಾನ-2 ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಭಾಗದ ಬಗ್ಗೆ ಅಧ್ಯಯನ ನಡೆಸಲಿದೆ.
ಈ ಉಪಗ್ರಹ 3,877 ಕೆಜಿ ತೂಕವಿದೆ. ಅಂದರೆ ಚಂದ್ರಯಾನ 1ರಲ್ಲಿ ಬಳಕೆ ಮಾಡಿದ ಉಪಗ್ರಹದ ತೂಕಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಭಾರವನ್ನು ಇದು ಹೊಂದಿದೆ. ಈ ಗಗನನೌಕೆಯು ಆರ್ಬಿಟರ್, ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಅನ್ನು ತನ್ನ ಜೊತೆಗೆ ಹೊತ್ತೊಯ್ಯುತ್ತಿದೆ.
ಈ ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಛ 978 ಕೋಟಿ ರೂಪಾಯಿ. ಅಂದರೆ ಹಾಲಿವುಡ್ನ ‘ಅವೆಂಜರ್ ಎಂಡ್ಗೇಮ್ ‘ ಸಿನಿಮಾ ಬಜೆಟ್ಗಿಂತ ಕಡಿಮೆ ಮೊತ್ತದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. ‘ಅವೆಂಜರ್ ಎಂಡ್ಗೇಮ್ ‘ ಸಿನಿಮಾಗೆ 2400 ಕೋಟಿ ರೂ. ವೆಚ್ಛ ಮಾಡಲಾಗಿತ್ತು.
ಉದ್ದೇಶವೇನು?:
ಈ ಉಪಗ್ರಹ ಟೆರ್ರೇನ್ ಮ್ಯಾಪಿಂಗ್ ಕ್ಯಾಮರಾ 2 ಅನ್ನು ಹೊಂದಿದೆ. ಚಂದ್ರನ ಮೇಲಿಳಿಯುವ 20 ಕೆಜಿ ತೂಕದ ರೋವರ್, ಚಂದ್ರನ ಮೇಲೆ ಸಂಚಾರ ನಡೆಸಿ ಅಲ್ಲಿಯ ಹವಾಮಾನ, ಅಲ್ಲಿನ ಕಲ್ಲು ಮತ್ತು ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಂತರ ಅದನ್ನು ಆರ್ಬಿಟರ್ ಮೂಲಕ ಭೂಮಿಗೆ ಕಳುಹಿಸುತ್ತದೆ. ಲ್ಯಾಂಡರ್-ರೋವರ್ನ ಆಯುಷ್ಯ 14 ದಿನಗಳಿದ್ದರೆ ಆರ್ಬಿಟರ್ 1 ವರ್ಷದವರೆಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಹೊಸ ದಾಖಲೆ:
ಈ ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಕಳುಹಿಸಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಲಿದೆ.