ಬೆಂಗಳೂರು: ಕಳೆದ ವಾರ ಶಾಸ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿಯವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.
ದೋಸ್ತಿ ಪಕ್ಷಗಳ ನಾಯಕರು ಅದೆಷ್ಟೇ ಮನವೊಲಿಸಲು ಯತ್ನಿಸಿದರೂ ಅವರ ಬಾಯಿಂದ ಬರ್ತಿರೋದು ಇಂದು ಹೇಳುತ್ತೇನೆ ಎಂದಾಗಿತ್ತು. ಇಂದು ಸದನಕ್ಕೆ ಹಾಜರಾಗಲಿರುವ ರಾಮಲಿಂಗಾರೆಡ್ಡಿ, ಮಧ್ಯಾಹ್ನ ಸ್ಪೀಕರ್ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ವೇಳೆ ತಮ್ಮ ಮನದಲ್ಲೇನಿದೆ ಅನ್ನೋದನ್ನು ಬಹಿರಂಗಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜೀನಾಮೆ ಹಿಂಪಡೆದು ಸರ್ಕಾರಕ್ಕೆ ಗುಟುಕು ಜೀವ ಕೊಡುವರೋ ಅಥವಾ ರಾಜೀನಾಮೆ ಹಿಂಪಡೆಯಲ್ಲ ಎಂದು ಹೇಳಿ ಶಾಕ್ ಕೊಡುವರೋ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ತೋಟದ ಮನೆಯಲ್ಲಿ ಓಲೈಕೆ:
ಭಾನುವಾರ ಸಂಜೆ, ಬೆಂಗಳೂರು ಹೊರವಲಯದ ತೋಟದ ಮನೆಗೆ ಹೋಗಿದ್ದ ಸಿಎಂ, ಡಿಸಿಎಂ ಪರಮೇಶ್ವರ್, ಮಾಜಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಕೆ ಬ್ರದರ್ಸ್, ರಾಮಲಿಂಗಾರೆಡ್ಡಿ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರಾಮಲಿಂಗಾರೆಡ್ಡಿ ಹಾಗೂ ಪರಮೇಶ್ವರ್ ಅವರನ್ನು ಎದುರು- ಬದುರು ಕೂರಿಸಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಪರಮೇಶ್ವರ್ ಎದುರೇ ರಾಮಲಿಂಗಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದು ಬಂದಿದೆ.
ಕಳೆದ 45 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ನನ್ನ ಶ್ರಮಕ್ಕೆ ಏನು ಬೆಲೆ ಇದೆ. ನನಗೆ ಸಚಿವ ಸ್ಥಾನ ಕೊಡಲಿಲ್ಲ ಓಕೆ, ಆದರೆ ಯಾವ ಕಾರಣಕ್ಕೆ ಕೊಡಲಿಲ್ಲ ಅನ್ನೋದನ್ನು ಸೌಜನ್ಯಕ್ಕಾದರೂ ನನಗೆ ತಿಳಿಸಲಿಲ್ಲ ಯಾಕೆ. ನನ್ನ ಮಗಳಿಗೆ ಟಿಕೆಟ್ ಕೊಟ್ಟಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ. ಹಲವರ ಮಕ್ಕಳಿಗೆ, ಕುಟುಂಬದವರಿಗೆ ಟಿಕೆಟ್ ಕೊಟ್ಟಿಲ್ವಾ. ಬೇರೆ ಯಾರು ಟಿಕೆಟ್ ಪಡೆದೇ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಲ್ಲಿ ರಾಮಲಿಂಗಾರೆಡ್ಡಿ ಪವರ್‍ಫುಲ್ ಅಂತೀರಿ, ಆದರೆ ಈ ಸರ್ಕಾರದಲ್ಲಿ ನನ್ನ ಯಾವ ಮಾತು ನಡೆದಿದೆ. ಮೇಯರ್ ನಮ್ಮವರು ಆದರು ನಿಜ. ಆದರೆ ಅವರ ಕೆಲಸಕ್ಕೆ ಎಷ್ಟೆಲ್ಲಾ ಅಡ್ಡಿಪಡಿಸಲಾಯ್ತು ಗೊತ್ತಾ. ನಾವು ಇಲ್ಲೇ ಹುಟ್ಟಿ- ಇಲ್ಲೇ ಬೆಳೆದವರು, ಆದರೆ ನಮ್ಮನ್ನು ಇನ್ಯಾರೋ ಆಳುತ್ತಿದ್ದಾರೆ ಎಂದು ಪರಮೇಶ್ವರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷ ಬೇರೆ ಯಾರನ್ನೋ ಬೆಂಗಳೂರು ಉಸ್ತುವಾರಿ ಸಚಿವರನ್ನಾಗಿ ಮಾಡಿದೆ. ಆದರೆ ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಕೈಕಟ್ಟಿ ಕೂರಬೇಕಾ. ಈಗ ಸರ್ಕಾರ ಸಂಕಷ್ಟದಲ್ಲಿ ಇದೆ ಅಂತೀರಿ. ಆದರೆ ಇಷ್ಟು ದಿನ ಎಲ್ಲರೂ ಎಲ್ಲಿದ್ರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.