ಬಳ್ಳಾರಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ.
ಹೀಗಾಗಿ ದೋಸ್ತಿ ನಾಯಕರಿಗೆ ಮತ್ತೊಂದು ಬಿಗ್ ಶಾಕ್ ಕಾದಿದ್ದು, ಕಾಂಗ್ರೆಸ್ಗೆ ಕೈ ಕೊಡಲು ನಾಗೇಂದ್ರ ಅವರು ಸಜ್ಜಾಗಿದ್ದಾರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಈ ಮಧ್ಯೆ ಆರೋಗ್ಯದ ನೆಪವೊಡ್ಡಿ ಗೈರು ಹಾಜರಾಗಲು ನಾಗೇಂದ್ರ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಹೃದಯಾಘಾತದಿಂದ ನಾಗೇಂದ್ರ ಅವರು ಭಾನುವಾರ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೃದಯಾಘಾತದ ನಂತರ ವೈದ್ಯರು ನಾಗೇಂದ್ರ ಅವರಿಗೆ ಸ್ಟಂಟ್ ಅಳವಡಿಸಿದ್ದು, ವೈದ್ಯರ ಸೂಚನೆ ಮೇರೆಗೆ ರೆಸ್ಟ್ ತಗೆದುಕೊಂಡು ಸದನಕ್ಕೆ ಗೈರು ಹಾಜರಾಗಲು ನಾಗೇಂದ್ರ ಅವರು ನಿರ್ಧರಿಸಿದ್ದಾರೆ.
ಭಾನುವಾರವಷ್ಟೇ ನಾಗೇಂದ್ರರನ್ನ ಕೈ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ನಾಗೇಂದ್ರ ಗೈರು ಹಾಜರಿಯ ಮುನ್ಸೂಚನೆ ಅರಿತೇ ಕೈ ನಾಯಕರು ಭೇಟಿ ಮಾಡಿದ್ದರು ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಈ ಹಿಂದೆ ಅತೃಪ್ತ ಶಾಸಕರ ಗುಂಪಿನಲ್ಲಿ ನಾಗೇಂದ್ರ ಅವರು ಕೂಡ ಸೇರಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯರ ಮನವೊಲಿಕೆಯಿಂದ ರಾಜೀನಾಮೆ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದರು ಎನ್ನಲಾಗಿದೆ.