ಲೋಕಸಭೆ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ – 2019ನ್ನು ಅಂಗೀಕರಿಸಿದೆ.

ಲೋಕಸಭೆ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ – 2019ನ್ನು ಅಂಗೀಕರಿಸಿದೆ. ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಷಾ, ವಿಧೇಯಕ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಲೋಕಸಭೆಗೆ ಭರವಸೆ ನೀಡಿದರು. ವಿಧೇಯಕವನ್ನು ಭಯೋತ್ಪಾದನೆ ನಿರ್ಮೂಲನೆಗೊಳಿಸುವ ಉದ್ದೇಶದಿಂದ ರೂಪಿಸಲಾಗಿದೆ. ಭಯೋತ್ಪಾದಕ ಪ್ರಕರಣಗಳ ತನಿಖೆಯ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿ ವ್ಯಕ್ತಿಗಳ ಧರ್ಮವನ್ನು ಎಂದೂ ಪರಿಗಣಿಸಿಲ್ಲ, ಪರಿಗಣಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಚಾರಣೆಗಳನ್ನು ತ್ವರಿತಗತಿಯಲ್ಲಿ ನಡೆಸಲು ಸಾಧ್ಯವಾಗುವಂತೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಖಾತರಿಪಡಿಸಲು ಸಾಧ್ಯವಾಗುವಂತೆ ತನಿಖಾ ಸಂಸ್ಥೆ ಸಬಲೀಕರಣಗೊಳಿಸಲು ವಿಧೇಯಕವನ್ನು ತರಲಾಗಿದೆ ಎಂದರು.

ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಂತೆ ಈ ಕಾಯ್ದೆಯು ದುರ್ಬಳಕೆಯಾಗುವ ಸಾಧ್ಯತೆ ಕುರಿತ ಆರೋಪಗಳಿಗೆ ಉತ್ತರಿಸಿದ ಗೃಹ ಸಚಿವರು, ಮತ ಬ್ಯಾಂಕ್ ರಕ್ಷಿಸಿಕೊಳ್ಳಲು ಪೋಟಾ ಕಾಯ್ದೆಯನ್ನು ರಾಜಕೀಯ ನಿರ್ಧಾರವಾಗಿ ರದ್ದುಪಡಿಸಲಾಗಿತ್ತು ಎಂದರು. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹತೋಟಿಗೆ ತರಲು ಪೋಟಾ ಪರಿಣಾಮಕಾರಿ ಕಾಯ್ದೆಯಾಗಿತ್ತು ಎಂದು ಗೃಹ ಸಚಿವರು ಪುನರುಚ್ಚರಿಸಿದರು. ಇದಕ್ಕೂ ಮುನ್ನ ವಿಧೇಯಕವನ್ನು ಲೋಕಸಭೆಯಲ್ಲಿ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಮಂಡಿಸಿದರು. ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್‍ನ ಮನೀಶ್ ತಿವಾರಿ, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚುವರಿ ಅಧಿಕಾರಗಳನ್ನು ನೀಡುವುದರಿಂದ ಅವುಗಳು ದುರುಪಯೋಗಗೊಂಡು ದೇಶ ಪೊಲೀಸ್ ರಾಜ್ಯವಾಗಿ ರಾಜಕೀಯ ವಿರೋಧಿಗಳ ವಿರುದ್ಧ ದ್ವೇಷದ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಆರೋಪಿಗಳು ನ್ಯಾಯದ ಹಕ್ಕು ಪಡೆಯಲು ತನಿಖೆ ಹಾಗೂ ಪ್ರಾಸಿಕ್ಯೂಷನ್ ಬೇರ್ಪಡಿಸಬೇಕು ಎಂದು ಹೇಳಿದರು. ತಿದ್ದುಪಡಿ ವಿಧೇಯಕ ಸಂವಿಧಾನ ದೇಶದ ಯಾವುದೇ ನಾಗರಿಕನಿಗೆ ಒದಗಿಸಿರುವ ಹಕ್ಕುಗಳನ್ನು ಮೊಟಕುಗೊಳಿಸಬಾರದು ಎಂದು ಮನೀಶ್ ತಿವಾರಿ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ