ನವದೆಹಲಿ, ಜು. 15- ಕರ್ನಾಟಕ ರಾಜ್ಯದಲ್ಲಿ ತಲೆದೋರಿರುವ ರಾಜಕೀಯ ವಿದ್ಯಮಾನ ಸಂವಿಧಾನಿಕ ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿದ್ದು, ನಾಳೆ ಸುಪ್ರೀಂ ಕೋರ್ಟ್ನಿಂದ ಹೊರಬೀಳುವ ಆದೇಶ ತೀವ್ರ ಕುತೂಹಲ ಕೆರಳಿಸಿದೆ.
ಈ ಮಧ್ಯೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರಿಗೆ ಸೂಚನೆ ನೀಡಬೇಕೆಂದು ಕೋರಿ ಐವರು ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಗಳು ಕೂಡ ನಾಳೆ ವಿಚಾರಣೆಗೆ ಬರಲಿದೆ.
ಐವರು ಅತೃಪ್ತ ಶಾಸಕರಾದ ಎಂಟಿಬಿ ನಾಗರಾಜ್, ಮುನಿರತ್ನ, ಆರ್.ರೋಷನ್ ಬೇಗ್, ಡಾ.ಕೆ.ಸುಧಾಕರ್ ಮತ್ತು ಆನಂದ್ಸಿಂಗ್ ಅವರುಗಳು ರಾಜೀನಾಮೆಯನ್ನು ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಇಂದು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.10 ಬಂಡಾಯ ಶಾಸಕರು ಈಗಾಗಲೇ ಸಲ್ಲಿಸಿರುವ ಅರ್ಜಿಯೊಂದಿಗೆ ಇನ್ನೂ ಐವರು ಶಾಸಕರ ಮನವಿಯನ್ನು ವಿಚಾರಣೆ ನಡೆಸುವುದಾಗಿ ತಿಳಿಸಿತು.
ಹೀಗಾಗಿ ನಾಳೆ ಈ ಅರ್ಜಿಗಳೆಲ್ಲ ವಿಚಾರಣೆಗೆ ಒಳಪಡಲಿದ್ದು, ಹೊರಬೀಳುವ ತೀರ್ಪು ಕುತೂಹಲ ಕೆರಳಿಸಿದೆ.
ಬಂಡಾಯ ಶಾಸಕರ ರಾಜೀನಾಮೆಗಳ ಅಂಗೀಕಾರ ಅಥವಾ ಅನರ್ಹತೆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಗಡುವು ಆದೇಶ ನಾಳೆ ಕೊನೆಗೊಳ್ಳಲಿದೆ.
ಸ್ಪೀಕರ್ ರಮೇಶ್ಕುಮಾರ್ ಅವರು, ಈ ಅವಧಿಯೊಳಗೆ ಕೈಗೊಳ್ಳುವ ಸ್ಪಷ್ಟ ನಿರ್ಧಾರ ಮತ್ತು ಅದಕ್ಕೆ ನೀಡಲಿರುವ ಕಾರಣಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ಮಂಗಳವಾರ ನೀಡಲಿರುವ ತೀರ್ಪು ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.
ಒಟ್ಟಾರೆ ನಾಳಿನ ತೀರ್ಪು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ನಿರ್ಣಾಯಕವಾಗಲಿದ್ದು, ಮುಂದಿನ ವಿದ್ಯಮಾನ ಆಸಕ್ತಿ ಕೆರಳಿಸಿದೆ. ಹೀಗಾಗಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.