ಬೆಂಗಳೂರು, ಜು.15-ಆಡಳಿತ ಪಕ್ಷಗಳ ಶಾಸಕರ ರಾಜೀನಾಮೆಯಿಂದ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಆಡಳಿತದ ಶಕ್ತಿಕೇಂದ್ರವಾದ ವಿಧಾನಸೌಧದಲ್ಲೂ ಅದೇ ಚರ್ಚೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ರಾಜಖಾರಣಿಗಳು, ಸಾರ್ವಜನಿಕರೂ ಸೇರಿದಂತೆ ಎಲ್ಲರೂ ಸರ್ಕಾರದ ಬಗ್ಗೆಯೇ ಚರ್ಚಿಸುತ್ತಿದ್ದಾರೆ. ಮೈತ್ರಿ ಸರ್ಕಾರ ಉಳಿಯುತ್ತೋ, ಅಳಿಯುತ್ತೋ, ಮುಂದೇನಾಗುತ್ತೋ, ವಿರೋಧ ಪಕ್ಷ ಏನು ಮಾಡುತ್ತಾರೆ, ಆಡಳಿತ ಪಕ್ಷದವರು ಏನು ಮಾಡುತ್ತಿವೆ ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ.
ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇನ್ನೆಷ್ಟು ದಿನ ಉಳಿಯುತ್ತೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುತ್ತವೆಯೋ ಇಲ್ಲವೋ ಎಂಬ ಮಾತುಕತೆಗಳು ಎಲ್ಲೆಡೆ ನಡೆಯುತ್ತಿವೆ. ಈ ನಡುವೆ ಬಿಜೆಪಿ ನಡೆಸುತ್ತಿರುವ ಕಾರ್ಯತಂತ್ರ, ರಾಜೀನಾಮೆ ನೀಡಿರುವ ಶಾಸಕರು ಮುಂಬೈನಲ್ಲಿ ಬೀಡುಬಿಟ್ಟಿರುವುದು, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಡೆಸುತ್ತಿರುವ ಹರಸಾಹಸ ದ ಬಗ್ಗೆ ಮಾತುಕತೆ ನಡೆಯುತ್ತಿದ್ದವು.
ವಿಧಾನಸಭೆಯ ಮೊಗಸಾಲೆಯಲ್ಲೂ ಸರ್ಕಾರದ ಅಳಿವು-ಉಳಿವಿನ ವಿಚಾರವೇ ಪ್ರಮುಖ ಚರ್ಚೆಯ ವಸ್ತುವಾಗಿತ್ತು. ಅಲ್ಲದೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೆಲವರು ಅಸಮಾಧಾನ ಬೇಸರ ವ್ಯಕ್ತಪಡಿಸುತ್ತಿದ್ದುದು ಸಾಮಾನ್ಯವಾಗಿತ್ತು.