ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.15-ಕಾಂಗ್ರೆಸ್-ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮೈತ್ರಿ ಸರ್ಕಾರ ಸಂಕಷ್ಟಕ್ಕೀಡಾಗಿದ್ದು, ಬಹುಮತ ಸಾಬೀತುಪಡಿಸಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಸಾಹಸ ಪಡುತ್ತಿದ್ದಾರೆ.

ಜೆಡಿಎಸ್‍ನ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇದ್ದು, ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸಲಹೆ ಮಾಡಿರುವ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆಯನ್ನು ಮುಂದುವರೆಸಿದ್ದಾರೆ. ಅಲ್ಲದೆ, ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ಮನವೊಲಿಸುವ ಪ್ರಯತ್ನವನ್ನೂ ಮುಂದುವರೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೂ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್‍ನ ಶಾಸಕರ್ಯಾರೂ ಮಣಿಯುವ ಲಕ್ಷಣಗಳು ಇದುವರೆಗೂ ಕಂಡುಬಂದಿಲ್ಲ. ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕರು ತಮ್ಮ ನಿಲುವಿಗೆ ಬಲವಾಗಿ ಅಂಟಿಕೊಂಡಿರುವುದು ಮೈತ್ರಿ ಸರ್ಕಾರದ ನಿದ್ದೆಗೆಡಿಸಿದೆ.

ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಲು ನಡೆಸಿರುವ ಇದುವರೆಗಿನ ಪ್ರಯತ್ನಗಳು ನಿರೀಕ್ಷಿತ ಫಲವನ್ನು ನೀಡಿಲ್ಲ. ಹೀಗಾಗಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆ ಘಳಿಗೆಯ ಸರ್ಕಸ್ ನಡೆಸಲಾಗುತ್ತಿದೆ. ಸಾಧ್ಯವಿರುವ ಎಲ್ಲಾ ಮಾರ್ಗಗಳಿಂದಲೂ ಸರ್ಕಾರದ ರಕ್ಷಣೆ ಮಾಡಿಕೊಳ್ಳಲು ಮುಖ್ಯಮಂತ್ರಿ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆ ಘಳಿಗೆಯವರೆಗೂ ಪ್ರಯತ್ನವನ್ನು ಮುಂದುವರೆಸುವುದು, ಸಾಧ್ಯವಾದರೆ ವಿಧಾನಸಭೆಯಲ್ಲಿ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸುವುದು, ಒಂದು ವೇಳೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಅತಂತ್ರ ವಿಧಾನಸಭೆ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ರಚನೆಯಾದ ಅನಿವಾರ್ಯತೆ, ಇದುವರೆಗಿನ ಮೈತ್ರಿ ಸರ್ಕಾರದ ಆಡಳಿತ, ರೈತರ ಸಾಲ ಮನ್ನಾ ಸೇರಿದಂತೆ ಸರ್ಕಾರ ಕೈಗೊಂಡಿರುವ ಜನಪರ ಮಾಹಿತಿಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಆನಂತರ ತಮ್ಮ ನಿರ್ಧಾರವನ್ನು ಮುಖ್ಯಮಂತ್ರಿ ಕೈಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜೀನಾಮೆ ನೀಡಿರುವ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಲಾಗುತ್ತಿದೆ.

ವಿಧಾನಸಭೆಯಲ್ಲಿ ವಿಶ್ವಾಸ ಮತ ಕೋರುವುದಾಗಿ ಈಗಾಗಲೇ ಮುಖ್ಯಮಂತ್ರಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಶಾಸಕರ ರಾಜೀನಾಮೆ ಪ್ರಕರಣ ನಾಳೆ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಬುಧವಾರ ವಿಶ್ವಾಸ ಮತ ಕೋರಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಅಲ್ಲಿಯವರೆಗೂ ರಾಜೀನಾಮೆ ನೀಡಿರುವ ಉಭಯ ಪಕ್ಷಗಳ ಶಾಸಕರ ಮನವೊಲಿಕೆ ಪ್ರಯತ್ನ ಮುಂದುವರೆಸಲಾಗುತ್ತದೆ.

ಕಾಂಗ್ರೆಸ್ ಪಕ್ಷದ ನಾಯಕರ ಸತತವಾಗಿ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಪ್ರಯತ್ನಗಳನ್ನು ಮಾಡುತ್ತಿದ್ದರಾದರೂ ಯಾವುದೇ ಫಲ ಸಿಕ್ಕಿಲ್ಲ.

ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ರಾಜೀನಾಮೆ ಹಿಂಪಡೆಯುವಂತೆ ಮಾಡಿದ ಮನವಿಯೂ ಫಲ ನೀಡಿಲ್ಲ. ಶಾಸಕ ಎಂ.ಟಿ.ಬಿ.ನಾಗರಾಜ್ ಅವರು ರಾಜೀನಾಮೆ ಹಿಂಪಡೆಯುವಂತೆ ಮಾಡಿದ್ದ ಒತ್ತಡಕ್ಕೆ ಮಣಿಯದೆ ಮುಂಬೈಗೆ ತೆರಳಿರುವುದು ಕಾಂಗ್ರೆಸ್-ಜೆಡಿಎಸ್ ನಾಯಕರ ಆತಂಕವನ್ನು ಇಮ್ಮಡಿಗೊಳಿಸಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಕೊನೆ ಘಳಿಗೆವರೆಗೂ ಸತತ ಪ್ರಯತ್ನಗಳನ್ನು ಮುಂದುವರೆಸಲಿದ್ದಾರೆ.

ಅಷ್ಟಾದರೂ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅನಿವಾರ್ಯವಾಗಿ ಎದುರಾಗುವ ಪರಿಸ್ಥಿತಿಯನ್ನು ಸ್ವೀಕರಿಸಿ ಮುಂದೆ ಸಾಗೋಣ ಎಂಬ ಅಭಿಪ್ರಾಯಕ್ಕೆ ಉಭಯ ಪಕ್ಷಗಳ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ