ಬೆಂಗಳೂರು,ಜು.15- ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷಗಳ ಶಾಸಕರ ರಾಜೀನಾಮೆ ಬೆಳವಣಿಗೆಗಳನ್ನು ಈವರೆಗೆ ತೆರೆಮರೆಯಲ್ಲಿ ವೀಕ್ಷಿಸುತ್ತಿದ್ದ ಬಿಜೆಪಿ ಇಂದು ನೇರವಾಗಿ ಅಖಾಡಕ್ಕಿಳಿದಿದೆ.
ಬಿಜೆಪಿ ನಿಯೋಗ ಇಂದು ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿ ವಿಶ್ವಾಸಮತ ಯಾಚನೆಗೆ ಇಂದೇ ಸಮಯ ನಿಗದಿ ಮಾಡುವಂತೆ ಮನವಿ ಮಾಡಿದೆ. ಈ ರೀತಿ ಸ್ಪೀಕರ್ ಇಂದೇ ವಿಶ್ವಾಸ ಮತಯಾಚನೆಗೆ ಅವಕಾಶ ನೀಡಿದರೆ ನೇರವಾಗಿ ಚರ್ಚೆ ಮಾಡಬಹುದು.
ಒಂದು ವೇಳೆ ವಿಶ್ವಾಸ ಮತಯಾಚನೆಗೆ ಅವಕಾಶ ನೀಡದಿದ್ದರೆ ತಮಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕಲ್ಪಿಸುವಂತೆಯೂ ಕೋರಿದೆ. ಹಾಗಾಗಿ ಈಗ ಸಮ್ಮಿಶ್ರ ಸರ್ಕಾರಕ್ಕೆ ಇನ್ನಷ್ಟು ಸಂಕಷ್ಟ ಎದುರಾಗಿದೆ.
ವಿಶ್ವಾಸಮತ ಯಾಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗ ಹೇಳಿಕೆ ನೀಡಿದ್ದನ್ನೇ ಆಧಾರವಾಗಿಟ್ಟುಕೊಂಡು ಇಂದೇ ವಿಶ್ವಾಸಮತಕ್ಕೆ ಅವಕಾಶ ನೀಡಲು ಕೋರಿರುವುದರಿಂದ ಸ್ಪೀಕರ್ ಅದಕ್ಕೆ ಅವಕಾಶ ನೀಡದಿದ್ದರೆ ಅವಿಶ್ವಾಸ ಮಂಡನೆಯಾಗಾದರೂ ಅವಕಾಶ ನೀಡಿದರೆ ಆ ವೇಳೆ ಅವಿಶ್ವಾಸದ ವಿರುದ್ಧ ಇರುವ ಶಾಸಕರ ಸಂಖ್ಯಾಬಲದಿಂದಾಗಿ ಚರ್ಚೆಗೆ ಅವಕಾಶ ಸಿಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.
ವಿಶ್ವಾಸಮತ ಯಾಚನೆ ವಿಳಂಬವಾದರೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಏರುಪೇರು ಆಗಲಿದೆ. ಒಂದೆಡೆ ಬಿಜೆಪಿ ವಿಶ್ವಾಸ ಮತ ಸಿಗದೆ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಿದ್ದರೂ, ಇನ್ನೊಂದೆಡೆ ಸರ್ಕಾರ ಉಳಿದೇ ಉಳಿಯುತ್ತದೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಹೇಳಿಕೊಳ್ಳುತ್ತಿವೆ.
ಈ ಎಲ್ಲದರ ನಡುವೆ ಅತೃಪ್ತ ಶಾಸಕರನ್ನು ಅನರ್ಹತೆಗೊಳಿಸುವಂತೆ ದೂರು ಸಹ ನೀಡಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮುಂಬೈಗೆ ತೆರಳಿ ಅತೃಪ್ತರ ಜೊತೆ ಮಾತನಾಡುವ ಬಗ್ಗೆಯೂ ಚಿಂತನೆ ನಡೆಸಿದ್ದರು.
ಆದರೆ ನಿನ್ನೆ ರಾತ್ರಿಯೇ ಮುಂಬೈನಲ್ಲಿರುವ ಅತೃಪ್ತರ ದಂಡು ನಮಗೆ ಬೆದರಿಕೆ ಇದೆ ಎಂದು ಮುಂಬೈ ಪೊಲೀಸರಿಗೆ ದೂರು ನೀಡಿದೆ. ಹಾಗಾಗಿ ಈ ಹಿಂದೆ ಸಚಿವ ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಿದ್ದಾಗ ಆದ ಘಟನೆ ಮರುಕಳಿಸಬಹುದು. ಅವರನ್ನು ಭೇಟಿ ಮಾಡಲು ತೆರಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅರಿತು ಉಭಯ ಪಕ್ಷಗಳ ನಾಯಕರು ಸಂಧಾನವನ್ನು ಕೈ ಬಿಟ್ಟಿದ್ದಾರೆ.
ಇತ್ತ ಬಿಜೆಪಿ ಕಾನೂನಾತ್ಮಕವಾಗಿ ಏನು ಅವಕಾಶ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿ ರಾಜಕೀಯ ದಾಳ ಉರುಳಿಸಲು ಮುಂದಾಗಿದೆ.
ಒಟ್ಟಾರೆ ತೆರೆಮರೆಯಲ್ಲಿದ್ದ ಬಿಜೆಪಿ ಕಸರತ್ತು ಇದೀಗ ನೇರವಾಗಿ ಅಖಾಡಕ್ಕೆ ಬಂದಿದೆ.