ಬೆಂಗಳೂರು, ಜು.15- ಇಂದಿನಿಂದ ಒಂದು ತಿಂಗಳ ಕಾಲ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳ ಸಂಗ್ರಹ ಅಭಿಯಾನಕ್ಕೆ ಬಿಬಿಎಂಪಿ ಚಾಲನೆ ನೀಡಿದೆ.
ಸಾರ್ವಜನಿಕರು ತಮ್ಮ ಬಳಿ ಇರುವ ಇ-ವೇಸ್ಟ್ಅನ್ನು ಬಿಬಿಎಂಪಿಯ ಎಂಟು ವಲಯಗಳಲ್ಲಿ ಸ್ಥಾಪಿಸಿರುವ ಸಂಗ್ರಹಾಗಾರಕ್ಕೆ ತಂದು ಹಾಕಬಹುದಾಗಿದೆ.
ಪಾಲಿಕೆ ಮತ್ತು ಬಿ ರೆಸ್ಪಾನ್ಸಿಬಲ್ ಸ್ವಯಂಸೇವಾ ಸಂಸ್ಥೆ ಸಹಯೋಗದಲ್ಲಿ ಇಂದಿನಿಂದ ಆರಂಭಿಸಿರುವ ಇ-ವೇಸ್ಟ್ ಸಂಗ್ರಹ ಅಭಿಯಾನಕ್ಕೆ ಮೇಯರ್ ಗಂಗಾಂಬಿಕೆ ಇಂದು ಚಾಲನೆ ನೀಡಿದರು.
ಇದುವರೆಗೂ ಇ-ತ್ಯಾಜ್ಯ ವಿಲೇವಾರಿ ಎಲ್ಲಿ ಮಾಡಬೇಕೆಂಬ ಗೊಂದಲಗಳಿದ್ದವು. ಇದೀಗ ಸ್ವಯಂಸೇವಾ ಸಂಸ್ಥೆ ಸಹಯೋಗದೊಂದಿಗೆ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇ-ತ್ಯಾಜ್ಯದ ಮೂಲಕ ವೈಜ್ಞಾನಿಕ ವಿಲೇವಾರಿ ಮಾಡಲು ಬಿಬಿಎಂಪಿ ಕ್ರಮ ವಹಿಸುತ್ತಿದೆ ಎಂದು ಅವರು ಹೇಳಿದರು.
ನಾಗರಿಕರು ಬಳಕೆಯಾಗದ ಇ-ತ್ಯಾಜ್ಯವನ್ನು ಮನೆ ಮತ್ತು ಕಚೇರಿಗಳಲ್ಲಿ ಇಟ್ಟುಕೊಳ್ಳುವ ಬದಲು ಪಾಲಿಕೆಗೆ ನೀಡಿದರೆ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಹೀಗಾಗಿ ಇಂದಿನಿಂದ ಒಂದು ತಿಂಗಳ ಅಭಿಯಾನ ಆರಂಭಿಸಲಾಗಿದ್ದು, ಎಲ್ಲ ವಲಯ ಕಚೇರಿಗಳಲ್ಲಿ ಇ-ತ್ಯಾಜ್ಯ ಬಿನ್ ಅಳವಡಿಸಲಾಗಿದ್ದು, ತಮ್ಮಲ್ಲಿರುವ ಅನುಪಯುಕ್ತ ವಸ್ತುಗಳನ್ನು ತಂದು ನೀಡುವಂತೆ ಮೇಯರ್ ಮನವಿ ಮಾಡಿಕೊಂಡರು.
ಆರಂಭದಲ್ಲಿ ಎಂಟು ವಲಯ ಕಚೇರಿಗಳಲ್ಲಿ ಇ-ತ್ಯಾಜ್ಯ ಬಿನ್ ಅಳವಡಿಸಲಾಗಿದೆ.ಮುಂದಿನ ಹಂತದಲ್ಲಿ ಎಲ್ಲ 198 ವಾರ್ಡ್ಗಳಲ್ಲೂ ಇ-ತ್ಯಾಜ್ಯ ಸಂಗ್ರಹ ಬಿನ್ ಅಳವಡಿಸಲು ಕ್ರಮ ವಹಿಸಲಾಗುವುದು ಎಂದರು.
ಇ-ತ್ಯಾಜ್ಯ ವಿಲೇವಾರಿಗಾಗಿ ಪಾಲಿಕೆ ಕೈಗೊಂಡಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮೇಯರ್ ಗಂಗಾಂಬಿಕೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಉಪಮಹಾಪೌರ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.