ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಅನುಸರಿಸಿ ಸರ್ಕಾರದ ಉಳಿವಿಗೆ ಪ್ರಯತ್ನ

ಬೆಂಗಳೂರು, ಜು.15-ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಪತನದ ಅಂಚಿಗೆ ತಲುಪಿದ್ದರೂ ಸರ್ಕಾರವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಮಧ್ಯಾಹ್ನ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳು, ಕಾನೂನು ಹೋರಾಟ, ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಪ್ರಯತ್ನಗಳು ಮೊದಲಾದ ವಿಚಾರಗಳ ಬಗ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.

ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅನುಸರಿಸುತ್ತಿದ್ದು, ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆದಿದ್ದು, ನಮ್ಮ ಶಾಸಕರೆಲ್ಲರೂ ಒಟ್ಟಾಗಿಯೇ ಇರಬೇಕು.ಯಾವುದೇ ಕಾರಣಕ್ಕೂ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂಬ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.

ಇದಕ್ಕೂ ಮುನ್ನ ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ನಡೆದಿರುವ ಪ್ರಯತ್ನಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ವಿಶ್ವಾಸಮತಯಾಚನೆ ಮಾಡಲು ವಿಧಾನಸಭಾಧ್ಯಕ್ಷರಲ್ಲಿ ಸಮಯಾವಕಾಶವನ್ನು ಕೋರಿರುವ ವಿಚಾರದ ಬಗ್ಗೆಯೂ ಗಂಭೀರ ಚರ್ಚೆ ನಡೆಸಿ ಗೌಡರಿಂದ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ