ಶಾಸಕ ನಾಗೇಂದ್ರ ಜೊತೆ ಮಾತುಕತೆ ನಡೆಸಿದ ಯಡಿಯೂರಪ್ಪ

ಬೆಂಗಳೂರು, ಜು. 14-ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಜತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಅತೃಪ್ತರ ಲಿಸ್ಟ್ಗೆ ಮತ್ತೊಬ್ಬರು ಸೇರ್ಪಡೆಯಾಗ್ತಾರಾ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಇಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ ನೀಡಿ ಬಿಎಸ್‍ವೈ ಜೊತೆ ಮಾತುಕತೆ ನಡೆಸಿದ್ದಾರೆ.ಈ ವೇಳೆ ಬಿ.ನಾಗೇಂದ್ರ ಅವರಿಗೆ ಬಿಎಸ್‍ವೈ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಎಸ್‍ವೈ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ..ಇತ್ತೀಚೆಗೆ ಬಾಲಚಂದ್ರ ಜಾರಕಿಹೊಳಿ ಅನಾರೋಗ್ಯದಿಂದ ಬಳಲುತ್ತಿದ್ದ ಬಿ.ನಾಗೇಂದ್ರ ಅವರನ್ನು ಭೇಟಿ ಮಾಡಿದ್ದರು.

ಆ ವೇಳೆ ನಾಗೇಂದ್ರ ಅವರು ನಾನು ಅನಾರೋಗ್ಯಕ್ಕೆ ತುತ್ತಾಗಿದ್ದರೂ ಯಾವೊಬ್ಬ ರಾಜಕೀಯ ನಾಯಕರು ತಮ್ಮ ಆರೋಗ್ಯದ ಕುರಿತು ವಿಚಾರಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.

ಈ ವಿಷಯ ತಿಳಿದ ಯಡಿಯೂರಪ್ಪ ಇಂದು ಕರೆ ಮಾಡಿ ನಾಗೇಂದ್ರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ರಾಜ್ಯ ರಾಜಕೀಯ ಪರಿಸ್ಥಿತಿ, ಅತೃಪ್ತ ಶಾಸಕರ ರಾಜೀನಾಮೆ ಇತ್ಯಾದಿ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ರಮೇಶ್ ಜಾರಕಿಹೊಳಿ ಪಾಳಯದಲ್ಲಿ ಗುರುತಿಸಿಕೊಂಡು ರಾಜೀನಾಮೆ ನೀಡಲು ಮುಂದಾಗಿದ್ದ ನಾಗೇಂದ್ರ, ಬಳ್ಳಾರಿ ಲೋಕಸಭಾ ಟಿಕೆಟ್ ತಮ್ಮ ಸಹೋದರನಿಗೆ ಕೊಡದ ಕಾರಣ ಮುನಿದು ಜಾರಕಿಹೊಳಿ ಪಾಳಯದಿಂದ ದೂರವಾಗಿದ್ದರು.

ಇದೀಗ ಯಡಿಯೂರಪ್ಪ ಸ್ವತಃ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿರುವ ಕಾರಣ ರಾಜೀನಾಮೆಗೆ ನಾಗೇಂದ್ರ ನಿರ್ಧರಿಸುತ್ತಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ನಾಗೇಂದ್ರ ಜೊತೆ ದೂರವಾಣಿ ಕರೆ ಬಳಿಕ ಜಾರಕಿಹೊಳಿ ಮತ್ತು ಯಡಿಯೂರಪ್ಪ ಕೆಲಕಾಲ ಮಾತುಕತೆ ನಡೆಸಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಶಾಸಕರ ಅನರ್ಹತೆ ಘಟನೆ ನಡೆದಿತ್ತು.

ಅದರಲ್ಲಿ ಬಾಲಚಂದ್ರ ಜಾರಕಿಹೊಳಿ ಅತೃಪ್ತರ ನೇತೃತ್ವ ವಹಿಸಿದ್ದರು. ಅಂದು ಅನರ್ಹಗೊಳಿಸುವಂತೆ ಸ್ಪೀಕರ್ ಆದೇಶ ಹೊರಡಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಮೊರೆ ಹೋಗಿ ಮತ್ತೆ ಶಾಸಕ ಸ್ಥಾನ ಪಡೆದುಕೊಳ್ಳುವಲ್ಲಿ ಶಾಸಕರು ಸಫಲರಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ