ಮುಖ್ಯಮಂತ್ರಿಯವರ ಆತಂಕವನ್ನು ಹೆಚ್ಚಿಸಿದ ಎಂ.ಟಿ.ಬಿ.ನಾಗರಾಜ್‍ರವರ ಮುಂಬೈ ಪ್ರಯಾಣ

ಬೆಂಗಳೂರು, ಜು.14- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂ.ಟಿ.ಬಿ.ನಾಗರಾಜ್ ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೆನ್ಷನ್‍ಗೆ ಒಳಗಾಗಿದ್ದಾರೆ.

ಎಂ.ಟಿ.ಬಿ.ನಾಗರಾಜ್ ಅವರು ಮುಂಬೈಗೆ ತೆರಳುತ್ತಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಪದ್ಮನಾಭನಗರದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ದೌಡಾಯಿಸಿದ ಕುಮಾರಸ್ವಾಮಿ ಅವರು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.

ನಿನ್ನೆ ಇಡೀ ದಿನ ಕಾಂಗ್ರೆಸ್ ನಾಯಕರು ಎಂ.ಟಿ.ಬಿ.ನಾಗರಾಜ್ ಅವರೊಂದಿಗೆ ನಡೆಸಿದ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿದಂತಿಲ್ಲ. ರಾಜೀನಾಮೆ ವಾಪಸ್ ಪಡೆಯುವುದಾಗಿ ನಿನ್ನೆ ರಾತ್ರಿ ಹೇಳಿದ್ದ ನಾಗರಾಜ್ ಇಂದು ರಾಜೀನಾಮೆ ನೀಡಿರುವ ಡಾ.ಸುಧಾಕರ್ ಅವರ ಮನವೊಲಿಸುವುದಾಗಿ ಹೇಳಿದ್ದರು.

ಆದರೆ, ಅಂತಹ ಪ್ರಯತ್ನಗಳು ನಡೆಯದೆ ಎಂ.ಟಿ.ಬಿ.ನಾಗರಾಜ್ ಅವರು ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಭೇಟಿಯಾಗಲು ಹೊರಟಿರುವುದು ಮುಖ್ಯಮಂತ್ರಿಯವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಹೀಗಾಗಿ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿ ವಿಶ್ವಾಸ ಮತ ಸಾಬೀತುಪಡಿಸಲು ಅನುಸರಿಸಬೇಕಾದ ಮಾರ್ಗ ಹಾಗೂ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಮಾರ್ಗದರ್ಶನ ಪಡೆದು ಎಂದು ಉನ್ನತ ಮೂಲಗಳು ತಿಳಿಸಿವೆ.

ತಡರಾತ್ರಿ ಶಾಸಕರೊಂದಿಗೆ ಸಭೆ:
ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿನ್ನೆ ತಡರಾತ್ರಿ ಜೆಡಿಎಸ್ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಿಶ್ವಾಸಮತ ಸಾಬೀತುಪಡಿಸುವ ಭರವಸೆ ನೀಡಿದ್ದರು.

ರಾಜಕೀಯವಾಗಿ ಏನೇ ಬೆಳವಣಿಗೆಗಳು ನಡೆದರೂ, ತಾವು ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸುವ ಅಚಲ ವಿಶ್ವಾಸವನ್ನು ಜೆಡಿಎಸ್ ಶಾಸಕರಿಗೆ ನೀಡಿದ್ದರು.

ಯಾವುದೇ ಕಾರಣಕ್ಕೂ ಶಾಸಕರು ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಶಾಸಕರ ಸಂಖ್ಯಾಬಲ ನಮಗಿದೆ ಎಂದು ಜೆಡಿಎಸ್ ಶಾಸಕರಲ್ಲಿ ವಿಶ್ವಾಸ ಮೂಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿರುವ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದು ತಾವು ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರೊಂದಿಗೆ ನಡೆಸಿರುವ ಸಮಾಲೋಚನೆಯಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರೊಂದಿಗೆ ಸಂಪರ್ಕದಲ್ಲಿದ್ದು, ಕೊನೆ ಘಳಿಗೆಯಲ್ಲಿ ಕೆಲವು ಶಾಸಕರು ಸರ್ಕಾರದ ರಕ್ಷಣೆಗೆ ಧಾವಿಸಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ತಾವು ಶಾಸಕರ ಮನವೊಲಿಸಲು ನಡೆಸುತ್ತಿರುವ ಪ್ರಯತ್ನಗಳು ಸಕಾರಾತ್ಮಕವಾಗಿದ್ದು, ಶಾಸಕರ್ಯಾರೂ ಗೊಂದಲಕ್ಕೆ ಒಳಗಾಗಬಾರದು. ಇದುವರೆಗೂ ಕಾಯ್ದುಕೊಂಡು ಬಂದಿರುವ ಒಗ್ಗಟ್ಟನ್ನು ವಿಶ್ವಾಸ ಮತಯಾಚನೆ ಪ್ರಕ್ರಿಯೆ ಮುಗಿಯುವವರೆಗೆ ಮುಂದುವರೆಸಿಕೊಂಡು ಹೋಗೋಣ ಎಂಬ ಸಲಹೆಯನ್ನು ಮುಖ್ಯಮಂತ್ರಿ ನೀಡಿದ್ದು, ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರದ ಅಭದ್ರತೆ ಬಗ್ಗೆ ಆತಂಕಕ್ಕೊಳಗಾಗಿ ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ. ಒಂದು ವೇಳೆ ಬಿಜೆಪಿಯವರು ಸಂಪರ್ಕಿಸುವ ಪ್ರಯತ್ನ ಮಾಡಿದರೆ ತಮ್ಮ ಗಮನಕ್ಕೆ ತರುವಂತೆಯೂ ಕಿವಿಮಾತು ಹೇಳಿದ್ದಾರೆ.

ಹೆಚ್ಚೂ ಕಡಿಮೆ ಒಂದು ವಾರದಿಂದ ರೆಸಾರ್ಟ್‍ನಲ್ಲಿರುವ ಜೆಡಿಎಸ್ ಶಾಸಕರು ಮುಂಜಾನೆ ವಾಯುವಿಹಾರ, ವ್ಯಾಯಾಮ, ಯೋಗ, ಧ್ಯಾನ, ಚರ್ಚೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜಕೀಯವಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಮಾಲೋಚಿಸಿ ಸರ್ಕಾರ ಉಳಿಸಿಕೊಳ್ಳುವುದು ಹೇಗೆ ?ರಾಜೀನಾಮೆ ನೀಡಿರುವ ಶಾಸಕರು ಮನಸ್ಸು ಬದಲಿಸಿ ಪಕ್ಷಕ್ಕೆ ಮರಳುತ್ತಾರಾ ಎಂಬುದೂ ಸೇರಿದಂತೆ ಸಾಧ್ಯಾಸಾಧ್ಯತೆಗಳ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ