ಬೆಂಗಳೂರು, ಜು.14- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಇಲಾಖೆಗಳನ್ನು ಖಾಸಗೀಕರಣ ಮಾಡ ಹೊರಟಿರುವುದರಿಂದ ಸಾಕಷ್ಟು ಅನಾನುಕೂಲವಾಗಲಿದೆ ಎಂದು ಗ್ರೂಪ್ ಸಿ ಕರ್ನಾಟಕ ವಲಯದ ಅಧ್ಯಕ್ಷ ಜವರಾಯಿಗೌಡ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘ, ಪೋಸ್ಟ್ ಮೆನ್ ಮತ್ತು ಎಂಟಿಎಸ್ ಬೆಂಗಳೂರು ಪೂರ್ವ ವಿಭಾಗ ವಲಯದ 32ನೇ ದ್ವೈವಾರ್ಷಿಕ ಅಧಿವೇಶನದಲ್ಲಿ ಅವರು ಮಾತನಾಡಿದರು.
ರೈಲ್ವೆ ಇಲಾಖೆಯಲ್ಲಿ ಈಗ ತೇಜಸ್ ಎಂಬ ಖಾಸಗಿ ರೈಲನ್ನು ಓಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಿ ನೌಕರರಿಗೆ ತೊಂದರೆ ಆಗಲಿದೆ.ಹೀಗಾಗಿ ಸರ್ಕಾರಿ ವಲಯವನ್ನು ಖಾಸಗಿಕರಣ ಮಾಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಕಾರ್ಮಿಕರ ವಿರುದ್ಧ ಇರುವ ಕಾನೂನುಗಳನ್ನು ಕಡಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಇದರಿಂದ ಬಂಡವಾಳ ಶಾಹಿಗಳನ್ನು ಬಲಿಷ್ಟರಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.
1968 ರಲ್ಲಿ ನಡೆದ ಹೋರಾಟದಲ್ಲಿ ಹಲವರು ಕೆಲಸ ಕಳೆದುಕೊಂಡಿದ್ದರು.ಇನ್ನು ಕೆಲವರು ಮೃತಪಟ್ಟರು.ಅದಾದ ಬಳಿಕ 1989 ರಲ್ಲಿ ಮತ್ತೆ ಸಂಘಟನೆ ಕಟ್ಟಲಾಯಿತು. ಮುಷ್ಕರ ಅಂದರೆ ಭಯದ ವಾತಾವರಣ ಈಗ ಅಂಚೆ ಇಲಾಖೆಯಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಬಿ.ವಿಜಯ ನಾಯರಿ, ಮಲ್ಲಿಕಾರ್ಜುನ್, ಈಶ್ವರಪ್ಪ, ಜಾನಕಿ ರಾಂ, ಸೀತಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.