ಬೆಂಗಳೂರು, ಜು.14-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸುವ ಪ್ರಯತ್ನವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಇಂದು ನಡೆಸಿದರು.
ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್, ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಒಪ್ಪುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಪಕ್ಷದ ಬಗ್ಗೆ ಅವರಿಗೆ ವಿಶೇಷ ಕಳಕಳಿ ಇದೆ. ಲಕ್ಷಾಂತರ ಕಾರ್ಯಕರ್ತರ ಅಪೇಕ್ಷೆ ಕೂಡ ರಾಜೀನಾಮೆ ವಾಪಸ್ ಪಡೆಯಬೇಕು ಎಂಬುದಾಗಿದೆ. ಅಂತಹ ಅಪೇಕ್ಷೆಯನ್ನು ತಿರಸ್ಕರಿಸುವುದಿಲ್ಲ ಎಂಬ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದು, ಸರ್ಕಾರವನ್ನು ಉಳಿಸಬೇಕೆಂಬ ಪ್ರಯತ್ನದಲ್ಲಿದ್ದೇವೆ. ಕಾಂಗ್ರೆಸ್ ನಾಯಕರಾದ ವೇಣುಗೋಪಾಲ್, ಗುಲಾಮ್ ನಬಿ ಆಜಾದ್, ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಎಲ್ಲಾ ನಾಯಕರು ಅವರೊಂದಿಗೆ ಮಾತನಾಡಿದ್ದಾರೆ. ನಮ್ಮ ಅವರ ಸಂಬಂಧ 40 ವರ್ಷಗಳಷ್ಟು ಹಳೆಯದು ಎಂದರು.
ಶಾಸಕರಾದ ಸೌಮ್ಯರೆಡ್ಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಶಾಸಕ ಎಂ.ಟಿ.ಬಿ.ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುಧಾಕರ್ ಅವರನ್ನು ಕರೆತರುವ ಉದ್ದೇಶದಿಂದಲೇ ಮುಂಬೈಗೆ ತೆರಳಿದ್ದಾರೆ ಎಂಬುದು ತಮ್ಮ ನಂಬಿಕೆ. ನಾಗರಾಜ್ ಅವರು ಕಾಂಗ್ರೆಸ್ನಲ್ಲಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಈಶ್ವರ್ ಖಂಡ್ರೆ ಮಾತನಾಡಿ, ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಸಂಕಷ್ಟದಲ್ಲಿರುವ ಕಾಂಗ್ರೆಸ್ ಅವರ ಅವಶ್ಯಕತೆ ಇದೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುತ್ತೇವೆ ಎಂದು ಮನವಿ ಮಾಡಿದ್ದೇವೆ. ಊಹಾಪೆಹಗಳು ಬೇಡ.ಮುಂದಾಗುತ್ತದೆ ಎಂಬುದನ್ನು ಕಾದುನೋಡಿ ಎಂದು ತಿಳಿಸಿದರು.