ಬೆಂಗಳೂರು, ಜು.14- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ನಾಳೆಯೇ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲೇಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಈಗಾಗಲೇ 16 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಇಬ್ಬರು ಶಾಸಕರು ಕೂಡ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ತೆಗೆದುಕೊಂಡಿದ್ದಾರೆ. ನೈತಿಕ ಹೊಣೆ ಹೊತ್ತು ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ನಾಳೆ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡಲಿ ಎಂದು ಒತ್ತಾಯಿಸಿದರು.
ಖಾಸಗಿ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ವಿಶ್ವಾಸ ಇಲ್ಲ ಎಂದು ಒಬ್ಬ ಸಚಿವರು ಹಾಗೂ ಶಾಸಕರೊಬ್ಬರು ಎಷ್ಟೇ ಒತ್ತಾಯಿಸಿದರೂ ಹೊರ ಹೋಗಿದ್ದಾರೆ. ನಾಳೆ ವಿಧಾನಸಭೆ ಸ್ಪೀಕರ್ ಅವರು ಸದನ ಸಲಹಾ ಸಮಿತಿಯ ಸಭೆ ಕರೆದಿದ್ದಾರೆ. ನಾನು ಸಭೆಯಲ್ಲಿ ಇಂದೇ ವಿಶ್ವಾಸಮತಯಾಚನೆ ಮಾಡಲು ಮುಖ್ಯಮಂತ್ರಿಗೆ ಸೂಚಿಸಬೇಕೆಂದು ಸ್ಪೀಕರ್ಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಹದಿನಾರು ಶಾಸಕರು ರಾಜೀನಾಮೆ ನೀಡಿದಾಗಲೇ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಮುಖ್ಯಮಂತ್ರಿಯವರು ಯಾವ ಧೈರ್ಯದ ಮೇಲೆ ಇನ್ನೂ ಸರ್ಕಾರ ಉಳಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿ ಕುರ್ಚಿಯ ಮೇಲೆ ಸ್ವಲ್ಪವಾದರೂ ಗೌರವವಿದ್ದರೆ ಕೂಡಲೇ ಅಧಿಕಾರದಿಂದ ಕೆಳಗಿಳಿಯಿರಿ ಎಂದು ಬಿಎಸ್ವೈ ಸವಾಲು ಹಾಕಿದರು.
ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಅನಗತ್ಯವಾಗಿ ರಾಜೀನಾಮೆ ನೀಡಿರುವ ಶಾಸಕರಲ್ಲಿ ಗೊಂದಲ ಸೃಷ್ಟಿಸಲು ಕುತಂತ್ರ ನಡೆಸುತ್ತಿದ್ದಾರೆ. ಇವರು ಏನೇ ಸರ್ಕಸ್ ಮಾಡಿದರೂ ಅತೃಪ್ತರ ಮನವೊಲಿಸಲು ಸಾಧ್ಯವಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಕುಮಾರಸ್ವಾಮಿ ಯಾವ ನೈತಿಕತೆಯಲ್ಲಿ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನಿಸಿದರು.
ಹದಿನೈದು ಶಾಸಕರು ತಮ್ಮ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಲು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ನೀವು ಬಹುಮತ ಕಳೆದುಕೊಂಡಿರುವಾಗ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯೇ ಇಲ್ಲ. ತಕ್ಷಣವೇ ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ ಎಂದು ಸಲಹೆ ನೀಡಿದರು.
ನಾಳೆ ಕಲಾಪದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ನಮ್ಮೆಲ್ಲ ಶಾಸಕರ ಜತೆ ಇಂದು ಸಭೆ ನಡೆಸಲಿದ್ದೇವೆ. ಕಲಾಪ ಸುಗಮವಾಗಿ ನಡೆಯಬೇಕು ಎಂಬುದೇ ನಮ್ಮ ಆಶಯ. ಮುಖ್ಯಮಂತ್ರಿಗಳು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಇದ್ದರೆ ಇಲ್ಲಿಯವರೆಗೂ ಕಾಯುತ್ತಿರಲಿಲ್ಲ ಎಂದು ಟೀಕಿಸಿದರು.