ಸಿಎಂ ವಿಶ್ವಾಸ ಮತಯಾಚನೆಯ ನಿರ್ಧಾರ ಘೋಷನೆ ಹಿನ್ನಲೆ : ಲೆಕ್ಕಾಚಾರದಲ್ಲಿ ತೊಡಿಗಿರುವ ಆಡಳಿತ ಮತ್ತು ಪ್ರತಿಪಕ್ಷಗಳು

ಬೆಂಗಳೂರು, ಜು.14-ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರು ವಿಶ್ವಾಸ ಮತಯಾಚನೆಯ ನಿರ್ಧಾರವನ್ನು ಘೋಷಿಸಿದ ಬೆನ್ನಲ್ಲೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಂಖ್ಯಾಬಲದ ಲೆಕ್ಕಾಚಾರಗಳ ಆಟ ಜೋರಾಗಿ ನಡೆಯುತ್ತಿದೆ.

ಮೈತ್ರಿ ಪಕ್ಷಗಳು ವಿಶ್ವಾಸ ಮತದ ಪರವಾಗಿ ಶಾಸಕ ಬಲದ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಬಿಜೆಪಿ ವಿರುದ್ಧವಾದ ಮತಗಳ ಲೆಕ್ಕಾಚಾರದಲ್ಲಿ ನಿರತವಾಗಿದೆ.

ಹೀಗಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ನಿರಂತರ ಸರಣಿ ಸಭೆಗಳನ್ನು ನಡೆಸುತ್ತಾ ತಮ್ಮ ತಮ್ಮ ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ 224 ಸಂಖ್ಯಾಬಲವಿರುವ ವಿಧಾನಸಭೆಯಲ್ಲಿ ಈಗಾಗಲೇ 16 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ರಾಜೀನಾಮೆಗಳು ಇನ್ನೂ ಅಂಗೀಕಾರವಾಗಿಲ್ಲ. ಹಾಗಾಗಿ ವಿಧಾನಸಭೆಯ ಸಂಖ್ಯಾಬಲ ಗರಿಷ್ಠಮಟ್ಟದಲ್ಲೇ ಇದೆ ಅಂದರೆ 224 ಹಾಗೇ ಉಳಿದಿದೆ. ಎಲ್ಲಾ ಸದಸ್ಯರು ಸದನಕ್ಕೆ ಹಾಜರಾದರೆ ಬಹುಮತ ಸಾಬೀತುಪಡಿಸಲು 113 ಮಂದಿ ಶಾಸಕರ ಬೆಂಬಲ ಅಗತ್ಯವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಿರುವ 16 ಮಂದಿ ಶಾಸಕರು ಗೈರು ಹಾಜರಾದರೆ ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲ 208ಕ್ಕೆ ಕುಸಿಯಲಿದೆ. ಬಹುಮತ ಸಾಬೀತಿಗೆ 105 ಮಂದಿ ಶಾಸಕರ ಸಂಖ್ಯಾಬಲ ಬೇಕಿದೆ.

ಅಂತಿಮವಾಗಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಎಷ್ಟು ಮಂದಿ ಶಾಸಕರು ಹಾಜರಿರುತ್ತಾರೋ ಅವರಲ್ಲಿ ಶೇ.50ಕ್ಕಿಂತ ಹೆಚ್ಚು ಶಾಸಕರ ಬೆಂಬಲ ಪಡೆದವರು ಗೆಲ್ಲುತ್ತಾರೆ.

ಬಿಜೆಪಿ ಚಿಹ್ನೆಯಡಿ ಗೆದ್ದಿರುವ ಶಾಸಕರ ಸಂಖ್ಯೆ ಬರೋಬ್ಬರಿ 105 ಇದೆ.ಪಕ್ಷೇತರ ಶಾಸಕರಾದ ರಾಣೆಬೆನ್ನೂರಿನ ಎನ್.ಶಂಕರ್, ಮುಳಬಾಗಿಲು ಕ್ಷೇತ್ರದ ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಬಿಜೆಪಿಗೆ ಬೆಂಬಲ ಘೋಷಿಸುತ್ತಿರುವುದರಿಂದ ಸದ್ಯದ ಬಿಜೆಪಿಯ ಬಲಾಬಲ 107ಕ್ಕೆ ಏರಿದೆ.

ಜೆಡಿಎಸ್‍ನ ಎಚ್.ವಿಶ್ವನಾಥ್, ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ 37 ಇದ್ದ ಜೆಡಿಎಸ್ ಶಾಸಕರ ಸಂಖ್ಯೆ 34ಕ್ಕೆ ಇಳಿದಿದೆ. ಕಾಂಗ್ರೆಸ್-ಜೆಡಿಎಸ್‍ನ ಒಟ್ಟು ಶಾಸಕರ ಸಂಖ್ಯೆ 99 ಆಗಲಿದ್ದು , ಬಿಎಸ್‍ಪಿ ಶಾಸಕ ಎನ್.ಮಹೇಶ್ ಸೇರಿ 100 ಆಗಲಿದೆ.

ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ಕನಿಷ್ಠ 8 ಶಾಸಕರ ಕೊರತೆ ಕಾಣುತ್ತಿದೆ. ಅತೃಪ್ತ ಶಾಸಕರ ಮನವೊಲಿಸಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಉಭಯ ಪಕ್ಷಗಳ ನಾಯಕರು ನಿರಂತರ ಸಾಹಸ ಮಾಡುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಮುಖ್ಯವಾಗಿದ್ದು, ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಯಾರು ಯಶಸ್ವಿಯಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈ ನಡುವೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಅಚಲ ವಿಶ್ವಾಸವನ್ನು ಹೊಂದಿವೆ.

ಕಾಂಗ್ರೆಸ್ 2018ರ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆದ್ದಿತ್ತು. ಅದರಲ್ಲಿ ಸಚಿವ ಸಿ.ಎಸ್.ಶಿವಳ್ಳಿ ಅವರ ಅಕಾಲಿಕ ನಿಧನ, ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಬಿಜೆಪಿಗೆ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸತ್‍ಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರಿಂದ ತೆರವಾದ ಚಿಂಚೋಳಿ ಸೇರಿದಂತೆ ಎರಡು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಚಿಂಚೋಳಿಯನ್ನು ಬಿಜೆಪಿ ಗೆದ್ದಿತ್ತು.ಸಿ.ಎಸ್.ಶಿವಳ್ಳಿ ಅವರ ಕುಂದಗೋಳ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿತ್ತು.ಹೀಗಾಗಿ ಕಾಂಗ್ರೆಸ್‍ನ ಬಲಾಬಲ 78ಕ್ಕೆ ಇಳಿದಿದೆ.

ಸ್ಪೀಕರ್ ಅವರು ಪಕ್ಷಾತೀತರಾಗಿರುವುದರಿಂದ ಕಾಂಗ್ರೆಸ್ ಶಾಸಕರ ಸಂಖ್ಯಾಬಲ 78 ಮಾತ್ರ.ಅನಿವಾರ್ಯ ಸಂದರ್ಭದಲ್ಲಿ ಸ್ಪೀಕರ್ ಮತ ಹಾಕಬಹುದಾಗಿದ್ದು, ಒಟ್ಟಾರೆ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 79 ಎಂದೇ ಪರಿಗಣಿಸಬಹುದಾಗಿತ್ತು.ಆದರೆ ಇದರಲ್ಲಿ 13 ಮಂದಿ ಈಗಾಗಲೇ ರಾಜೀನಾಮೆ ನೀಡಿ ಪಕ್ಷದ ನಾಯಕರ ಸಂಧಾನವನ್ನು ಧಿಕ್ಕರಿಸಿದ್ದಾರೆ.ವಿಪ್‍ಗಳನ್ನು ಉಲ್ಲಂಘಿಸಿದ್ದಾರೆ.

ವಿಶ್ವಾಸ ಮತಯಾಚನೆ ವೇಳೆ ಇವರಲ್ಲಿ ಎಷ್ಟು ಮಂದಿ ವಾಪಸ್ ಬರುತ್ತಾರೆ ಎಂಬುದು ಗೊತ್ತಿಲ್ಲ. ಮುಂಬೈನಲ್ಲಿರುವ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೆರತಿ ಬಸವರಾಜ್ ಅವರುಗಳು ಮರಳಿ ಬರಬಹುದು ಎಂಬ ವಿಶ್ವಾಸ ಕಾಂಗ್ರೆಸ್‍ಗಿದೆ.ಇವರ ಜೊತೆಗೆ ಆನಂದ್‍ಸಿಂಗ್, ರಾಮಲಿಂಗಾರೆಡ್ಡಿ, ಸುಧಾಕರ್ ಅವರ ಮನವೊಲಿಸುವ ವಿಶ್ವಾಸ ಇದೆ.

ರಾಜೀನಾಮೆ ನೀಡಿರುವವರ ಪೈಕಿ ಈಗಾಗಲೇ ಎಂ.ಟಿ.ಬಿ.ನಾಗರಾಜ್ ಕಾಂಗ್ರೆಸ್ ಸಂಧಾನಕ್ಕೆ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ರಮೇಶ್‍ಜಾರಕಿ ಹೊಳಿ ಮತ್ತು ಮಹೇಶ್ ಕುಮಟಳ್ಳಿ ಇಬ್ಬರನ್ನು ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಮುಗಿದ ಬಳಿಕ ಶಾಸಕ ಸ್ಥಾನದಿಂದ ಅನರ್ಹಗೊಳ್ಳಬಹುದೆಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.

ಇನ್ನು ಮುಂಬೈನಲ್ಲಿರುವ ಬಿ.ಸಿ.ಪಾಟೀಲ್, ಶಿವರಾಮ್‍ಹೆಬ್ಬಾರ್, ಪ್ರತಾಪ್‍ಗೌಡ ಪಾಟೀಲ್ ಅವರು ರಾಜಕೀಯವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬುದು ಗೊಂದಲದಲ್ಲಿದೆ.

ರೋಷನ್‍ಬೇಗ್ ಅವರು ಹಿರಿಯ ನಾಯಕರು ಮಧ್ಯಪ್ರವೇಶಿದರೆ ಸಂಧಾನಕ್ಕೆ ಒಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜೀನಾಮೆ ಕೊಟ್ಟಿರುವವರ ಪೈಕಿ 7 ರಿಂದ 8 ಮಂದಿ ಮರಳಿ ಗೂಡಿಗೆ ಬರುವ ವಿಶ್ವಾಸ ಇದೆ.

ಒಂದು ವೇಳೆ ಈ ಲೆಕ್ಕಾಚಾರ ಸಾಧ್ಯವಾದರೆ ದೋಸ್ತಿಗಳಿಗೆ ಈಗಿರುವ 107 ಶಾಸಕರ ಸಂಖ್ಯಾಬಲದ ಜೊತೆಗೆ ಮತ್ತಷ್ಟು ಸೇರಿ 113ರ ಮ್ಯಾಜಿಕ್ ನಂಬರ್‍ನ್ನು ದಾಟುವ ಲೆಕ್ಕಾಚಾರಗಳಿವೆ.

ಈ ನಡುವೆ ಮತ್ತೂ ಕೆಲವು ಅಪಾಯಕಾರಿ ಮುನ್ಸೂಚನೆಗಳಿದ್ದು, ಬಿಜೆಪಿಯವರ ಆಪರೇಷನ್ ಕಮಲಕ್ಕೆ ಬಲಿಯಾಗಿ ಕಾಂಗ್ರೆಸ್-ಜೆಡಿಎಸ್ ಕೆಲವು ಶಾಸಕರು ರಾಜೀನಾಮೆ ನೀಡಬಹುದು ಅಥವಾ ಕಾಂಗ್ರೆಸ್-ಜೆಡಿಎಸ್ ಪಕ್ಷಗಳೇ ರಿವರ್ಸ್ ಆಪರೇಷನ್ ಮಾಡಿ ಬಿಜೆಪಿ ಕೆಲ ಶಾಸಕರನ್ನು ವಿಶ್ವಾಸ ಮತಯಾಚನೆ ದಿನ ಗೈರು ಹಾಜರು ಮಾಡಿಸಬಹುದು.

ಏನೇ ಸಾಧ್ಯ ಸಾಧ್ಯತೆಗಳಿದ್ದರೂ ಕೊನೇ ಕ್ಷಣದಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವ ಮನೋಭಾವವೇ ಹೆಚ್ಚು ಚಾಲ್ತಿಗೆ ಬರಲಿದೆ.ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತಯಾಚನೆಯಲ್ಲಿ ಗೆದ್ದು ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂದು ಖಚಿತವಾದರೆ ಮುಂಬೈನಲ್ಲಿರುವ ಬಹಳಷ್ಟು ಅತೃಪ್ತರು ಎದ್ದು-ಬಿದ್ದು ಓಡಿ ಬರುವ ಸಾಧ್ಯತೆ ಇದೆ.

ಇಲ್ಲ ಬಿಜೆಪಿ ನಡೆಸಿರುವ ಕಾರ್ಯಾಚರಣೆ ಯಶಸ್ವಿಯಾಗಿ ಸರ್ಕಾರ ಬಿದ್ದೇ ಬೀಳುತ್ತದೆ ಎಂಬುದು ಖಾತ್ರಿಯಾದರೆ ಈಗ ರಾಜೀನಾಮೆ ನೀಡಿರುವ ಶಾಸಕರ ಜೊತೆ ಇನ್ನಷ್ಟು ಮಂದಿ ಸಾಲುಗಟ್ಟಿ ರಾಜೀನಾಮೆ ನೀಡುವ ಸಂದರ್ಭವೂ ಎದುರಾಗಬಹುದು. ಏನೇ ಆದರೂ ಇವೆಲ್ಲವೂ ಸುಪ್ರೀಂಕೋರ್ಟ್ ಮಂಗಳವಾರ ಅಥವಾ ಅನಂತರದಲ್ಲಿ ನೀಡುವ ಮಹತ್ವದ ತೀರ್ಪುಗಳನ್ನು ಅವಲಂಬಿಸಿದೆ.

ಸದ್ಯ ಪರಿಸ್ಥಿತಿಯಲ್ಲಿ ಹಕ್ಕಿಯು ಕಾಳನ್ನು ಒಂದೊಂದೇ ಹೆಕ್ಕಿ ತಂದಂತೆ ದೋಸ್ತಿ ನಾಯಕರು ಮುನಿಸಿಕೊಂಡಿರುವ ಶಾಸಕರನ್ನು ಕರೆತಂದು ಬಲಾಬಲ ಕ್ರೋಢೀಕರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ