ಬೆಂಗಳೂರು, ಜು. 14– ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಬಳಿಕ ಕರ್ನಾಟಕದ ರಾಜಕೀಯದಲ್ಲಿ ಕ್ಷಣಕ್ಕೊಂದು ಬದಲಾವಣೆಯಾಗುತ್ತಿದೆ. ಪ್ರತಿಪಕ್ಷ ಬಿಜೆಪಿಯ ನಾಯಕರ ದೆಹಲಿ ಭೇಟಿ ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಶನಿವಾರ ಕಾಂಗ್ರೆಸ್ನ 9, ಜೆಡಿಎಸ್ನ 3 ಶಾಸಕರ ರಾಜೀನಾಮೆ ಬಳಿಕ ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಎದುರಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ.
ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಬಾಲಚಂದ್ರಜಾರಕಿಹೊಳಿ ಅವರು ಶನಿವಾರ ದೆಹಲಿಗೆ ತೆರಳಿದ್ದಾರೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸದನದಲ್ಲಿ ಬಹುಮತ ಸಾಬೀತು ಮಾಡುವುದಾಗಿ ಹೇಳಿದ ಬಳಿಕ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮುಂಬೈನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಅರವಿಂದ ಲಿಂಬಾವಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಹೈ ಕಮಾಂಡ್ ನಾಯಕರ ಭೇಟಿಯಾಗಿ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದ ರಾಜಕೀಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರು ಹೈಕಮಾಂಡ್ ನಾಯಕರಿಗೆ ತಿಳಿಸಲಿದ್ದು, ಅವರ ಸಲಹೆಯನ್ನು ಪಡೆದು ವಾಪಸ್ ಆಗಲಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಬುಧವಾರ ವಿಶ್ವಾಸ ಮತಯಾಚಿಸುವ ನಿರೀಕ್ಷೆ ಇದ್ದು, ಅಂದು ಪ್ರತಿಪಕ್ಷ ಬಿಜೆಪಿಯ ತಂತ್ರ ಏನಿರಬೇಕು ಎಂಬ ಬಗ್ಗೆ ಸಲಹೆ ಪಡೆಯಲು ದೆಹಲಿಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮಂಗಳವಾರ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಆಗ್ರಹಿಸುತ್ತಿದೆ. ಬಿಜೆಪಿಯ ಮುಂದಿನ ನಡೆ ಬಗ್ಗೆ ಹೈಕಮಾಂಡ್ ನಾಯಕರು ಸಲಹೆ ನೀಡುವ ಸಾಧ್ಯತೆ ಇದೆ.
ಬಿಜೆಪಿ ಶಾಸಕರು ರಾಜಾನಕುಂಟೆ ಬಳಿಯ ರಮಾಡ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಹೋಟೆಲ್ಗೆ ಭೇಟಿ ನೀಡಿ ಶಾಸಕರ ಜೊತೆ ಭೋಜನ ಸವಿದರು.ಬಳಿಕ ಅವರೊಂದಿಗೆ ಸಭೆ ನಡೆಸಿ ವಾಪಸ್ ಆದರು.