ಬಿಜೆಪಿಯವರ ಪ್ರಯತ್ನ ಯಶಸ್ವಿಯಾಗುವುದಿಲ್ಲ-ಶಾಸಕ ತನ್ವೀರ್ ಸೇಠ್

ಬೆಂಗಳೂರು,ಜು.13- ವಿಶ್ವಾಸಮತ ಯಾಚನೆಯಲ್ಲಿ ನಾವು ಗೆಲ್ಲಲಿದ್ದು, ಸರ್ಕಾರ ಉಳಿಸಿಕೊಳ್ಳಲಿದ್ದೇವೆ ಎಂದು ಶಾಸಕ ತನ್ವೀರ್ ಸೇಠ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಅಥವಾ ಗುರುವಾರ ವಿಶ್ವಾಸಮತ ಯಾಚನೆಗೆ ಬರಬಹುದು. ಅದರಲ್ಲಿ ನಾವು ಗೆಲ್ಲುವುದು ನಿಶ್ಚಿತ.ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ. ಬಿಜೆಪಿಯವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.

ಈ ಹಿಂದೆಯೇ ಅಸ್ಥಿರತೆ ಕಾಡಿದಾಗ ವಿಶ್ವಾಸಮತ ಯಾಚನೆ ನಡೆದಾಗ ಎಲ್ಲ ಶಾಸಕರು ಒಟ್ಟಿಗೆ ಸೇರಿದ್ದೆವು.ಇದೊಂದು ರೀತಿಯ ಸಂಪ್ರದಾಯ.ಸಮಯಕ್ಕೆ ಸರಿಯಾಗಿ ಬರಲು ಇದರಿಂದ ಅನುಕೂಲ.ಒಂದೇ ಕಡೆ ಸೇರಿದ್ದರೆ ಒಳ್ಳೆಯದು.ಈ ನಿಟ್ಟಿನಲ್ಲಿ ಖಾಸಗಿ ಹೋಟೆಲ್‍ನಲ್ಲಿ ಸ್ವಂತ ಖರ್ಚಿನಲ್ಲಿ ವಾಸ್ತವ್ಯ ಹೂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಮ್ಮ ಮೇಲೆ ನಂಬಿಕೆ ಇಲ್ಲ ಎಂದು ಹೋಟೆಲ್‍ನಲ್ಲಿ ತಂಗಿಲ್ಲ. ಬದಲಿಗೆ ಸಮಯಕ್ಕೆ ಸರಿಯಾಗಿ ಎಲ್ಲರೂ ಒಟ್ಟಾಗಿ ಸೇರಲು ಇಲ್ಲಿ ತಂಗಿದ್ದೇವೆ ಎಂದರು.
ಕೆಲವು ಶಾಸಕರು ಪಕ್ಷಾಂತರ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದರೆ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ.ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ.ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಕೆಲವರು ಬರುತ್ತಾರೆ.ಎಲ್ಲರೂ ಒಂದೇ ಕಡೆ ಸೇರುತ್ತೇವೆ. ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತೇವೆ. ಸಮ್ಮಿಶ್ರ ಸರ್ಕಾರವನ್ನು ಮುಂದುವರೆಸುತ್ತೇವೆ. ನಮಗೆ ಇನ್ನು ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ಕುಟುಂಬಕ್ಕೆ 110 ವರ್ಷಗಳ ರಾಜಕೀಯ ಇತಿಹಾಸವಿದೆ. ನಮ್ಮ ತಾತ ಮಹರಾಜರ ಕಾಲದಲ್ಲಿ ಸ್ಥಳೀಯ ಸಂಸ್ತೆಗೆ ಆಯ್ಕೆಯಾಗಿ,ಶಾಸಕರಾಗಿದ್ದರು. ತಂದೆಯವರು ಶಾಸಕರಾಗಿ, ಸಂಸದರಾಗಿದ್ದರು.

ಜನರು ನಮ್ಮ ಮೇಲೆ ಇಟ್ಟಿರುವ ಪ್ರೀತಿವಿಶ್ವಾಸದಿಂದಾಗಿ ನಮಗೆ ಅವಕಾಶ ಸಿಕ್ಕಿವೆ. ಆದರೆ ಇಂದಿನ ರಾಜಕಾರಣ ಹಾಳಾಗಿದೆ. ಜನರ ನಂಬಿಕೆಗೆ ವಿಶ್ವಾಸದ್ರೋಹ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.
ರೇವಣ್ಣ ಅವರು ಮಾಟಮಂತ್ರ ಮಾಡಿ ಸರ್ಕಾರ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.ನಮಗೆ ದೆವ್ವಗಳ ಮೇಲೆ ನಂಬಿಕೆ ಇಲ್ಲ. ದೇವರ ಮೇಲೆ ನಂಬಿಕೆ ಇದೆ.ಯಾವ ನಿಂಬೆಹಣ್ಣಿನಿಂದಲೂ ಸರ್ಕಾರ ಉಳಿಸಲು ಸಾಧ್ಯವಿಲ್ಲ. ಶಾಸಕರ ವಿಶ್ವಾಸದಿಂದ ನಾವು ಸರ್ಕಾರ ಉಳಿಸಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್-ಜೆಡಿಎಸ್ ಹೈಕಮಾಂಡ್ ನಿರ್ಧಾರದ ಪ್ರಯತ್ನವಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದ ಅವರು, ಸಭಾಧ್ಯಕ್ಷರನ್ನು ಭೇಟಿ ಮಾಡಲು ಸುಪ್ರೀಂಕೋರ್ಟ್‍ವರೆಗೂ ಹೋಗಬೇಕಿತ್ತಾ ಎಂದು ಲೇವಡಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ