ಬೆಂಗಳೂರು, ಜು.13-ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ವಿಶ್ವಾಸ ಮತ ಯಾಚನೆ ಮಾಡುವ ವೇಳೆ ಅತೃಪ್ತಗೊಂಡಿರುವ ಮೈತ್ರಿ ಪಕ್ಷದ ಇನ್ನಷ್ಟು ಶಾಸಕರು ಸದನಕ್ಕೆ ಗೈರು ಹಾಜರಾಗಲಿದ್ದಾರೆ. ಎರಡು ದಿನಗಳವರೆಗೆ ಕಾದು ನೋಡಿ ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಬಾಂಬ್ ಸಿಡಿಸಿದ್ದಾರೆ.
ರೊಮೋಡ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ.ಮುಖ್ಯಮಂತ್ರಿ ಮೇಲೆ ವಿಶ್ವಾಸವಿಲ್ಲ ಎಂದು ಶಾಸಕರು ಪತ್ರದಲ್ಲಿ ಹೇಳಿದ್ದಾರೆ. ವಿಶ್ವಾಸಮತ ಕಳೆದುಕೊಂಡ ಮೇಲೆ ಬಹುಮತ ಸಾಬೀತುಪಡಿಸುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.
ಅತೃಪ್ತರನ್ನು ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿ ವಿಶ್ವಾಸ ಮತಯಾಚನೆಯ ತಂತ್ರ ಹೆಣೆಯುತ್ತಿದ್ದಾರೆ.ಆದರೆ ಅವರು ಬಹುಮತ ಸಾಬೀತು ಪಡಿಸುವ ದಿನವೇ ಅನೇಕ ಶಾಸಕರು ಗೈರು ಹಾಜರಾಗುತ್ತಾರೆ.ನಾನು ಏನನ್ನೂ ಹೇಳುವುದಿಲ್ಲ ಎಂದು ಕುತೂಹಲ ಕೆರಳಿಸಿದರು.
ಕುಮಾರಸ್ವಾಮಿಯವರಿಗೆ ಬಹುಮತವಿಲ್ಲ ಎಂಬುದು ಮನವರಿಕೆಯಾಗಿದೆ. ಅವರು ಗೌರವಯುತವಾಗಿ ರಾಜೀನಾಮೆ ನೀಡಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೂ ಹೆಚ್ಚಿನ ಗೌರವ ಬರುತ್ತಿತ್ತು.ಆದರೆ ಯಾವ ಕಾರಣಕ್ಕಾಗಿ ವಿಳಂಬ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ದೋಸ್ತಿ ನಾಯಕರು ಏನೇ ಸರ್ಕಸ್ ಮಾಡಿದರೂ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾವ ನಂಬರ್ ಗೇಮ್ ಕೂಡ ನಡೆಯುವುದಿಲ್ಲ. ಬಿಜೆಪಿ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ ಎಂದರು.