ಬೆಂಗಳೂರು, ಜು.13-ಪಕ್ಷದ ನಾಯಕರ ನಡವಳಿಕೆಗಳಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಬೆಂಗಳೂರಿನ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಪಕ್ಷ ಬಿಟ್ಟು ಹೋಗದಂತೆ ರಾಮಲಿಂಗಾರೆಡ್ಡಿ ಅವರನ್ನು ಕಾಂಗ್ರೆಸ್ ಮುಖಂಡರು ಸತತವಾಗಿ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ.ಆದರೆ ಪಕ್ಷದಲ್ಲಿ ಉಳಿಯಬೇಕೇ ಇಲ್ಲವೇ, ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧವಾಗಿರಬೇಕೇ ಎಂಬುದರ ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ.
ಈವರೆಗೂ ತಮ್ಮ ಮುಂದಿನ ನಿರ್ಧಾರವೇನು ಎಂಬುದನ್ನು ಯಾರ ಬಳಿಯೂ ಬಹಿರಂಗಪಡಿಸದ ರಾಮಲಿಂಗಾರೆಡ್ಡಿ 15ರವರೆಗೆ ಯಾವುದೇ ರೀತಿಯ ರಾಜಕೀಯ ತೀರ್ಮಾನ ಕೈಗೊಳ್ಳುವುದಿಲ್ಲ. ಅಲ್ಲಿಯವರೆಗೂ ಕಾದು ನೋಡುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಬಿಜೆಪಿ ಶಾಸಕರಾದ ಯಲಹಂಕದ ಎಸ್.ಆರ್.ವಿಶ್ವನಾಥ್, ಎಂ.ಕೃಷ್ಣಪ್ಪ, ಬಿಬಿಎಂಪಿ ವಿರೋಧಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಕೆಲ ಮುಖಂಡರು ಲಕ್ಕಸಂದ್ರದಲ್ಲಿರುವ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ಈ ವೇಳೆಯೂ ಅವರು ಬಿಜೆಪಿ ನಾಯಕರಿಗೆ ಯಾವುದೇ ರೀತಿಯಲ್ಲಿ ಖಚಿತ ಭರವಸೆಯನ್ನು ನೀಡಿಲ್ಲ ಎನ್ನಲಾಗುತ್ತಿದೆ.ತಮ್ಮ ಆಪ್ತರು ಹಾಗೂ ಹಿತೈಷಿಗಳ ಬಳಿ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ. 15 ರಂದು ವಿಧಾನಸಭೆ ಸ್ಪೀಕರ್ ರಾಜೀನಾಮೆ ಅರ್ಜಿಯ ವಿಚಾರಣೆ ನಡೆಯಲಿದೆ.ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಧಾರ ಅಚಲ..?
ಇನ್ನೊಂದು ಮೂಲಗಳ ಪ್ರಕಾರ ಒಂದು ಬಾರಿ ನಿರ್ಧಾರ ಮಾಡಿದ ಮೇಲೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರ ಅಚಲ. ಪಕ್ಷದಲ್ಲಿ ಆಗಿರುವ ಬೆಳವಣಿಗೆಗಳಿಂದ ಬೇಸತ್ತು ಹೊರಬಂದಿದ್ದೇನೆ. ಯಾವುದೇ ಕಾರಣಕ್ಕೂ ನನ್ನನ್ನು ಮನವೊಲಿಸುವ, ಮಾತುಕತೆ ನಡೆಸುವ ಪ್ರಯತ್ನ ಮಾಡಬೇಡಿ ಎಂದು ಪಕ್ಷದ ನಾಯಕರಿಗೆ ರಾಮಲಿಂಗಾರೆಡ್ಡಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಬದ್ಧವಾಗಿದ್ದಾರೆ. ಕಾಂಗ್ರೆಸ್ನ ಯಾವ ನಾಯಕರೂ ತಮ್ಮನ್ನು ಮನವೊಲಿಸಬೇಕಾದ ಅಗತ್ಯವಿಲ್ಲ. ಒಂದು ವರ್ಷದಿಂದ ಪಕ್ಷದಲ್ಲಿ ಅನುಭವಿಸಿದ ನೋವು ಮತ್ತು ಅವಮಾನಕ್ಕೆ ಯಾರೊಬ್ಬರೂ ಸ್ಪಂದಿಸಲಿಲ್ಲ. ಈಗ ಸರ್ಕಾರ ಬಿದ್ದು ಹೋಗುವ ಸ್ಥಿತಿಯಲ್ಲಿ ನನ್ನ ಬಳಿ ಬಂದರೆ ಏನು ಪ್ರಯೋಜನ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ನಾನು ಒಂದು ಮಂತ್ರಿ ಸ್ಥಾನಕ್ಕಾಗಿ ಬ್ಲ್ಯಾಕ್ಮೇಲ್ ಮಾಡಬೇಕಾದ ಅಗತ್ಯವಿಲ್ಲ. ನಾನು ಮುಖ್ಯಮಂತ್ರಿ ಹುದ್ದೆ ಬಿಟ್ಟು ಎಲ್ಲಾ ಸಚಿವ ಸ್ಥಾನಗಳನ್ನು ನೋಡಿದ್ದೇನೆ. ನನಗೆ ಪಕ್ಷದಲ್ಲಿ ಸಾಕಷ್ಟು ಮುಜುಗರ ಉಂಟು ಮಾಡುವಂತಹ ಪ್ರಸಂಗಗಳು ಜರುಗಿದವು.ಇದನ್ನು ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಅನಿವಾರ್ಯವಾಗಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಕಡೇ ಪಕ್ಷ ಅಸಮಾಧಾನಗೊಂಡ ನನ್ನಂತಹ ಅನೇಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಪಕ್ಷದ ನಾಯಕರು ವಿಫಲರಾದರು.ಶಾಸಕರ ದುಃಖದುಮ್ಮಾನಗಳನ್ನು ಕೇಳುವವರೇ ಇಲ್ಲದಂತಾಯಿತು.ಸರ್ಕಾರದಲ್ಲಿ ಕೆಲವೇ ಕೆಲವು ಮಂದಿಯ ಮಾತುಗಳು ನಡೆದವು.ಇದರಿಂದ ಸಹಜವಾಗಿ ಅನೇಕರು ಅಸಮಾಧಾನ ಹೊರಹಾಕಿಕೊಂಡರು.ಆಗ ಕಡೆಗಣಿಸಿ ಈಗ ಮನವೊಲಿಸಲು ಬಂದರೆ ಯಾರು ತಾನೇ ಸುಮ್ಮನಿರುತ್ತಾರೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಕಾಕತಾಳೀಯ ಎಂಬಂತೆ ಇಂದು ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರು ಆಗಮಿಸಿದ್ದರು.ಇದೊಂದು ಸೌಹಾರ್ದಯುತ ಭೇಟಿ ಎಂದು ತಿಳಿದುಬಂದಿದೆ.ಸದ್ಯದಲ್ಲೇ ರೆಡ್ಡಿ ಸಂಘದ ಚುನಾವಣೆ ನಡೆಯುತ್ತಿದ್ದು, ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ನಾವು ರಾಮಲಿಂಗಾರೆಡ್ಡಿ ಅವರ ಹಿರಿಯ ನಾಯಕರ ಮನವೊಲಿಸುವಷ್ಟು ದೊಡ್ಡವರಲ್ಲ. ಅವರು ಒಮ್ಮೆ ನಿರ್ಧಾರ ಕೈಗೊಂಡರೆ ಮುಗಿಯಿತು. ಬಂಡೆ ರೀತಿ ಅಲುಗಾಡುವುದಿಲ್ಲ. ನಮ್ಮ ಭೇಟಿಗೂ ಇಂದಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಅರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿದರು.