ಹಣ, ಜಾತಿಬಲ, ರಾಜಕೀಯ ಹಿನ್ನಲೆಯುಳ್ಳವರಿಗೆ ಟಿಕೇಟ್-ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ

ಬೆಂಗಳೂರು, ಜು.13-ಚುನಾವಣೆಯಲ್ಲಿ ಒಂದು ಪಕ್ಷದಿಂದ ಸ್ಪರ್ಧಿಸಿ ಗೆದ್ದ ಮೇಲೆ ಮತ್ತೊಂದು ಪಕ್ಷ ಸೇರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಇಂದಿಲ್ಲಿ ತಿಳಿಸಿದರು.

ಬಿ ಪ್ಯಾಕ್ ನಾಗರಿಕ ನಾಯಕತ್ವ ತರಬೇತಿ ಪದವಿಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ತತ್ವ ಸಿದ್ದಾಂತಗಳಿಗೆ ಈಗ ಬೆಲೆ ಕೊಡುತ್ತಿಲ್ಲ. ರಾಜಕೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ತಮ್ಮ 50 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ರಾಜಕೀಯ ಪರಿಸ್ಥಿತಿ ನೋಡಿರಲಿಲ್ಲ. ನಾವು ಪಕ್ಷದ ತತ್ವ ಸಿದ್ಧಾಂತಗಳಿಗೆ ಬೆಲೆ ಕೊಡುತ್ತಿದ್ದೆವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಪರ್ಧಿಸಲು ಸೀಟು ಕೇಳಿದರೆ ರಾಜಕೀಯ ಪಕ್ಷಗಳು ಗೆಲ್ಲುವ ಸಾಮಥ್ರ್ಯ ಮುಂದಿಡುತ್ತಾರೆ.ಚುನಾವಣೆಯಲ್ಲಿ ನಿಮಗೆ ಗೆಲ್ಲುವ ಸಾಮಥ್ರ್ಯ ಇಲ್ಲ ಎಂಬ ಕಾರಣಕ್ಕೆ ಟಿಕೇಟ್ ನಿರಾಕರಿಸಲಾಗುತ್ತಿದೆ.ಹಣ, ಜಾತಿಬಲ, ರಾಜಕೀಯ ಹಿನ್ನೆಲೆಯುಳ್ಳವರಿಗೆ ಟಿಕೇಟ್ ನೀಡಲಾಗುತ್ತದೆ.ಮಹಿಳೆಯರಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಚುನಾವಣೆಯಲ್ಲಿ ಗೆದ್ದಂತಹವರು, ಮುಂದೆ ಬರುವ ಚುನಾವಣೆಗೆ ಹಣ ಗಳಿಸುವ ಕಡೆ ಗಮನ ಹರಿಸುತ್ತಾರೆ.ಹೀಗಾದರೆ ಅಭಿವೃದ್ಧಿ ಕಾರ್ಯಗಳು ಹೇಗೆ ಆಗುತ್ತವೆ?ಬೆಂಗಳೂರಿನಲ್ಲೂ ಕೂಡ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

100, 150 ವರ್ಷಗಳ ಹಳೆಯ ಕಟ್ಟಡಗಳು ಸುಭದ್ರವಾಗಿವೆ. ಇದಕ್ಕೆ ಗುಣಮಟ್ಟವೇ ಕಾರಣ.ಇತ್ತೀಚಿನ ಕಟ್ಟಡಗಳು ಅಲ್ಪಾವಧಿಯಲ್ಲೇ ಬಿರುಕು ಬಿಡುತ್ತವೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ.ನಿರ್ಮಾಣ ಹಂತದಲ್ಲಿ ಗುಣಮಟ್ಟ ಪರಿಶೀಲಿಸಿ ಕಟ್ಟಡ ಸುಭದ್ರವಾಗಿರುವಂತೆ ನೋಡಿಕೊಳ್ಳಬೇಕು.ಆದರೆ ಕಟ್ಟಡದ ದುರಂತ ಅನುಭವಿಸಿದಾಗ ಪರಿಹಾರ ನೀಡಿ ಸುಮ್ಮನಾಗುವ ಪರಿಸ್ಥಿತಿ ಇದೆ.ಇದು ಒಳ್ಳೆಯದಲ್ಲ ಎಂದರು.
ಕಾರ್ಯಕ್ರಮದಲ್ಲಿ ಬಿಪ್ಯಾಕ್‍ನ ಅಧ್ಯಕ್ಷರಾದ ಕಿರಣ್ ಮಜುಂದಾರ್‍ಷಾ, ಸಿಇಒ ರೇವತಿ ಅಶೋಕ್, ತಕ್ಷಶಿಲಾ ಸಂಸ್ಥೆಯ ಸಹ ಸಂಪಾದಕರಾದ ನಿತಿನ್‍ಪೈ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ