ಬೆಂಗಳೂರು, ಜು.13-ಸಮ್ಮಿಶ್ರ ಸರ್ಕಾರ ಈಗಾಗಲೇ ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಯಾಚನೆ ಮಾಡುವುದರಲ್ಲಿ ಅರ್ಥವೇ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ಸರ್ಕಾರ ಬಿದ್ದುಹೋಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15ಕ್ಕೂ ಹೆಚ್ಚು ಶಾಸಕರು ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಕುಮಾರಸ್ವಾಮಿಯವರು ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡುತ್ತೇನೆಂದು ಹೇಳಿರುವುದರಲ್ಲಿ ಅತೃಪ್ತರು ಮರಳಿ ಹಿಂತಿರುಗಲಿ ಎಂಬ ಷಡ್ಯಂತ್ರ ಅಡಗಿದೆ ಎಂದು ವಾಗ್ದಾಳಿ ನಡೆಸಿದರು.
ಶಾಸಕರು ರಾಜೀನಾಮೆ ನೀಡಿದಾಗಲೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು.ಆದರೆ ಇಷ್ಟು ದಿನಗಳವರೆಗೆ ಎಳೆದಿರುವುದನ್ನು ನೋಡಿದರೆ ಅತೃಪ್ತರು ಚದುರದಂತೆ ವ್ಯವಸ್ಥೆಯಡಿ ಕಾರ್ಯತಂತ್ರ ರೂಪಿಸಲಾಗಿದೆ.ಆದರೆ ಸಮ್ಮಿಶ್ರ ಸರ್ಕಾರ ಏನೇ ಸರ್ಕಸ್ ಮಾಡಿದರೂ ಪತನವಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈಗಾಗಲೇ ರಾಜೀನಾಮೆ ನೀಡಿ ಬೆಂಗಳೂರಿನಿಂದ ಹೊರ ಹೋಗಿರುವ ಶಾಸಕರು ಹಿಂತಿರುಗಿ ಬರಲಿ ಎಂಬ ಕಾರಣಕ್ಕಾಗಿ ಬಹುಮತವಿಲ್ಲದಿದ್ದರೂ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆ ಮಾಡಲು ಮುಂದಾಗಿರುವುದು ಗೊಂದಲಗಳಿಗೆ ಕಾರಣವಾಗಿದೆ. ನಮಗೆ ಈ ಬಾರಿ ಅನುಕೂಲಕರವಾದ ವಾತಾವರಣ ಇದೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡುವುದನ್ನು ತಡೆಗಟ್ಟಲು ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತಡೆಯಲು ಸಾಧ್ಯವಾಗದಿರುವಾಗ ಈಗ ಏನೇ ಮಾಡಿದರೂ ಪ್ರಯೋಜನವಿಲ್ಲ. ದೇವರು ಕೂಡ ಸರ್ಕಾರವನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ನಿನ್ನೆಯಷ್ಟೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸುವುದಾಗಿ ತಿಳಿಸಿದ್ದರು.ಮೂಲಗಳ ಪ್ರಕಾರ ಬುಧವಾರ ವಿಶ್ವಾಸ ಮತ ಯಾಚಿಸಲು ಮುಂದಾಗಿದ್ದಾರೆ.ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಕಸರತ್ತು ಆರಂಭವಾಗಿದೆ.