ನಾವ್ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ

ಬೆಂಗಳೂರು, ಜು.13- ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ದೋಸ್ತಿ ನಾಯಕರು ರಿವರ್ಸ್ ಆಪರೇಷನ್ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಕೆಲವು ಶಾಸಕರು ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ನಾವ್ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಪಕ್ಷ ಬಿಡುವುದಿಲ್ಲ. ನಾನು 1999ರಲ್ಲಿ ರಾಜಕೀಯ ಸೇರಿದ್ದೆ.ಆಗಿನಿಂದಲೂ ಪಕ್ಷಕ್ಕೆ ನಿಷ್ಠನಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ.

ನನ್ನ ಹೆಸರು ರಿವರ್ಸ್ ಆಪರೇಷನ್‍ನಲ್ಲಿ ಕೇಳಿಬರುತ್ತಿದೆ.ಆದರೆ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದಾಗಲೂ ನಾನು ಅವರೊಂದಿಗೆ ಹೋದವನಲ್ಲ. ಯಾರೋ ಬೇಕೆಂದೇ ನನ್ನ ಹೆಸರನ್ನು ತೇಲಿಬಿಟ್ಟು ಕಿತಾಪತಿ ಮಾಡುತ್ತಿದ್ದಾರೆ ಎಂದು ಸಿರಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದ್ದಾರೆ.

ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ದೋಸ್ತಿ ನಾಯಕರು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ರೇವಣ್ಣ ವಾಮಾಚಾರ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ .ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ನಮಗೆ ರಿವರ್ಸ್ ಆಪರೇಷನ್ ಭಯವಿಲ್ಲ. ನಾವೆಲ್ಲ ಒಟ್ಟಿಗೆ ಇದ್ದೇವೆ. ಅವರೇ ಬಿದ್ದುಹೋಗುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಬೇಸೆತ್ತು ರಾಜೀನಾಮೆ ಕೊಟ್ಟು . ಶಾಸಕರು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ, ವಿಪ್ ತೆಗೆದುಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ನಮಗೆ ಜನಾದೇಶ ಇತ್ತು.ಅವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿದರು.ಬಿಜೆಪಿಯನ್ನು ಹೊರಗಿಡುವ ಒಂದೇ ಕಾರಣಕ್ಕೆ ಸರ್ಕಾರ ರಚಿಸಿದರು.ಆದರೆ ಮೈತ್ರಿ ಸರ್ಕಾರದ ನಡೆಗೆ ಶಾಸಕರು ಬೇಸತ್ತು ರಾಜೀನಾಮೆ ನೀಡಿದ್ದಾರೆ. ಇನ್ನು ಈ ಸರ್ಕಾರ ಉಳಿಯುವುದಲ್ಲ. ಪತನವಾಗುವುದು ಖಚಿತ ಎಂದು ಘಂಟಾಘೋಷವಾಗಿ ರೇಣುಕಾಚಾರ್ಯ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ