ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಸೆಮಿ ಫೈನಲ್ ನಲ್ಲಿ ಸೋಲಿಸುವ ಮೂಲಕ ಇಂಗ್ಲೆಂಡ್ ಇತಿಹಾಸ ಬರೆದಿದೆ..
ಹೌದು.. ನಿನ್ನೆ ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಇಂಗ್ಲೆಂಡ್ ತಂಡ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸಿ ಫೈನಲ್ ಗೇರಿದೆ. ಆ ಮೂಲಕ ವಿಶ್ವಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಸೆಮಿ ಫೈನಲ್ ನಲ್ಲಿ ಸೋಲಿಸಿದ ತಂಡ ಎಂಬ ಕೀರ್ತಿಗೂ ಭಾಜನವಾಗಿದೆ.
ಈ ಹಿಂದೆ ಸಾಕಷ್ಟು ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡ ಸೆಮಿ ಫೈನಲ್ ಪ್ರವೇಶ ಮಾಡಿತ್ತು. ಆದರೆ ಆ ತಂಡವನ್ನು ಸೆಮಿ ಫೈನಲ್ ನಲ್ಲಿ ಯಾವುದೇ ತಂಡ ಸೋಲಿಸಿರಲಿಲ್ಲ. ಆಸ್ಟ್ರೇಲಿಯಾ ತಂಡ ಮೊದಲ ಬಾರಿಗೆ 1975ರಲ್ಲಿ ಸೆಮಿ ಫೈನಲ್ ಗೆ ಏರಿತ್ತು. ಅಂದು ಇದೇ ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿತ್ತು. ಇದಾದ ಬಳಿಕ 1987ರಲ್ಲಿ ಮತ್ತೆ ಆಸ್ಟ್ರೇಲಿಯಾ ತಂಡ ಸೆಮಿ ಫೈನಲ್ ಪ್ರವೇಶಿಸಿತ್ತು, ಅಂದು ಪಾಕಿಸ್ತಾನದ ವಿರುದ್ಧ 18 ರನ್ ಗಳ ವಿರೋಚಿತ ಜಯ ಸಾಧಿಸಿತ್ತು.
1996ರಲ್ಲಿ ಮತ್ತೆ ಸೆಮೀಸ್ ಪ್ರವೇಶಿಸಿದ್ದ ಆಸಿಸ್ ಬಳಗ, ಅಂದು ಐದು ವಿಕೆಟ್ ಗಳ ಅಂತರದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಫೈನಲ್ ಗೇರಿತ್ತು. 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಟೈ ಆಗಿತ್ತು. ಆ ಬಳಿಕ 2003ರಲ್ಲಿ ಶ್ರೀಲಂಕಾ ವಿರುದ್ಧ 48 ರನ್ ಗಳ ಭರ್ಜರಿ ಜಯ ಸಾಧಿಸಿತ್ತು. 2007ರಲ್ಲಿ ಮತ್ತೆ ಸೆಮೀಸ್ ಗೇರಿದ್ದ ಆಸಿಸ್, ಅಂದು ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್ ಗಳ ಅಂತರದಲ್ಲಿ ಮಣಿಸಿತ್ತು., 2015ರಲ್ಲಿ ಮತ್ತೆ ಸೆಮೀಸ್ ಗೆ ಬಂದಿದ್ದ ಆಸ್ಟ್ರೇಲಿಯಾ ಭಾರತವನ್ನು 95 ರನ್ ಗಳ ಅಂತರದಲ್ಲಿ ಮಣಿಸಿ ಫೈನಲ್ ಗೇರಿತ್ತು.
ಆ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡ ಅಜೇಯವಾಗಿ ಉಳಿದಿತ್ತು. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಸೋಲುಕಂಡು ಟೂರ್ನಿಯಿಂದ ನಿರ್ಗಮಿಸಿದೆ. ಅಲ್ಲದೆ ಆಸಿಸ್ ಅಜೇಯ ದಾಖಲೆ ಕೂಡ ಇದರೊಂದಿಗೆ ಧೂಳಿಪಟವಾಗಿದೆ.