ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಹಲವು ಅನಿರೀಕ್ಷಿತ ಫಲಿತಾಂಶಗಳಿಗೆ ವೇದಿಕೆಯಾಗಿದ್ದು, ಇದೀಗ ಐತಿಹಾಸಿಕ ದಾಖಲೆಯೊಂದಕ್ಕೆ ವೇದಿಕೆ ಕಲ್ಪಿಸುತ್ತಿದೆ.
ಹೌದು.. ಈ ಬಾರಿ ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ಮತ್ತು ಪ್ರಬಲ ಆಸ್ಟ್ರೇಲಿಯಾವನ್ನು ಮಣಿಸಿದ ಇಂಗ್ಲೆಂಡ್ ತಂಡ ವಿಶ್ಪಕಪ್ ಫೈನಲ್ ಪ್ರವೇಶ ಮಾಡಿದ್ದು, ಈ ಎರಡೂ ತಂಡಗಳಲ್ಲಿ ಯಾವುದೇ ತಂಡ ಫೈನಲ್ ನಲ್ಲಿ ಜಯ ಗಳಿಸಿದರೂ, ನೂತನ ಇತಿಹಾಸ ನಿರ್ಮಾಣವಾಗಲಿದೆ.
ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರೆ, ಇಂಗ್ಲೆಂಡ್ 1992ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಬರೋಬ್ಬರಿ 27 ವರ್ಷ (9969 ದಿನ)ಗಳ ಬಳಿಕ ತಂಡ ಫೈನಲ್ ಗೇರಿದೆ. 92ರ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಇಂಗ್ಲೆಂಡ್, ಈ ಬಾರಿ ಟ್ರೋಫಿ ಎತ್ತಿಹಿಡಿಯುವ ವಿಶ್ವಾಸದಲ್ಲಿದೆ. ಆ ಮೂಲಕ ಕ್ರಿಕೆಟ್ ಜನಕರೇ ಆದರೂ ಒಮ್ಮೆಯೂ ವಿಶ್ವಕಪ್ ಗೆಲ್ಲದ ಶಾಪದಿಂದ ಮುಕ್ತರಾಗಲು ಇಂಗ್ಲೆಂಡ್ ತಂಡ ಪ್ರಯತ್ನಿಸಲಿದೆ.
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಇದುವರೆಗೂ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ. ಕಳೆದ ಬಾರಿ ನ್ಯೂಜಿಲೆಂಡ್ ತಂಡಕ್ಕೆ ಟ್ರೋಫಿ ಗೆಲ್ಲೋ ಅವಕಾಶವಿತ್ತ. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲು ಅನುಭವಿಸೋ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದರೂ, ವಿಶ್ವಕಪ್ ಜಯಿಸಲಾಗದೇ ನಿರಾಶೆ ಅನುಭವಿಸಿದ್ದ ನ್ಯೂಜಿಲೆಂಡ್ ತಂಡ ಈ ಬಾರಿ ಶತಾಯಗತಾಯ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿದೆ.
ಹೀಗಾಗಿ 1996ರ ಬಳಿಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಜಗತ್ತು ಹೊಸ ವಿಶ್ವ ಚಾಂಪಿಯನ್ನರನ್ನು ಸ್ವಾಗತಿಸಲಿದೆ. 1996ರಲ್ಲಿ ಶ್ರೀಲಂಕಾ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಬಳಿಕ ಆಸ್ಟ್ರೇಲಿಯಾ ಪ್ರಾಬಲ್ಯ ಮೆರೆಯಿತು. 1999, 2003, 2007ರಲ್ಲಿ ಆಸ್ಟ್ರೇಲಿಯಾ ಟ್ರೋಫಿ ಗೆದ್ದುಕೊಂಡರೆ, 2011ರಲ್ಲಿ ಭಾರತ ಗೆದ್ದಿತ್ತು. ಇನ್ನು 2015ರಲ್ಲಿ ಮತ್ತೆ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದುಕೊಂಡಿತು. ಹೀಗಾಗಿ 13 ವರ್ಷಗಳ ಬಳಿಕ ಹೊಸ ತಂಡವೊಂದು ಟ್ರೋಫಿ ಗೆಲ್ಲಲಿದೆ.