ಬೆಂಗಳೂರು,ಜು.11-ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡು ಅಲ್ಪಮತಕ್ಕೆ ಕುಸಿದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪ್ರಮುಖ ಆಡಳಿತಾತ್ಮಕ ತೀರ್ಮಾನ ಕೈಗೊಳ್ಳಬಾರದೆಂದು ರಾಜ್ಯಪಾಲ ವಿ.ಆರ್.ವಾಲ ಅವರು ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ಸಂಪುಟ ಸಭೆ ನಡೆಯುತ್ತಿರುವ ಬೆನ್ನಲೇ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ಭಾಸ್ಕರ್ ಅವರ ಮೂಲಕ ಸಂಪುಟ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಕೆಲವು ಇಂಜಿನಿಯರ್ಗಳಿಗೆ ಎರಡು ದಿನಗಳ ಹಿಂದೆ ಮುಂಬಡ್ತಿ, ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಜಿಂದಾಲ್ ಕಂಪನಿಗೆ ಜಮೀನು ನೀಡಲು ಮುಂದಾಗಿರುವುದು, ಬೇರೆ ಬೇರೆ ಇಲಾಖೆಗಳಲ್ಲಿ ಅಧಿಕಾರಿಗಳ ಮುಂಬಡ್ತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿದ್ದು, ಸರ್ಕಾರದ ಕೆಲವು ತೀರ್ಮಾನಗಳಿಗೆ ಬ್ರೇಕ್ ಹಾಕಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಜು.6ರಂದು 12 ಮಂದಿ ಶಾಸಕರು ರಾಜೀನಾಮೆ ನೀಡಿದ್ದರು. ಅದಕ್ಕೂ ಮುನ್ನವೇ ಶಾಸಕ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದರು.
ಈ ಬೆಳವಣಿಗೆಯ ನಂತರ ಶಿವಾಜಿನಗರ ಶಾಸಕ ರೋಷನ್ಬೇಗ್ ಹಾಗೂ ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್ ರಾಜೀನಾಮೆ ಕೊಟ್ಟಿದ್ದರು.
ಹೀಗೆ ದೋಸ್ತಿ ಸರ್ಕಾರ ದಿನದಿಂದ ದಿನಕ್ಕೆ ಬಹುಮತದಿಂದ ಕುಸಿಯುತ್ತಿದ್ದು, ಸದ್ಯ ಅಲ್ಪಮತಕ್ಕೆ ಬಂದಿದೆ ಎಂಬ ಅನುಮಾನವಿದೆ. ಬಹುಮತ ಕಳೆದುಕೊಂಡ ಸರ್ಕಾರ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವುದು ಸಂವಿಧಾನ ಬಾಹಿರ ಎಂಬುದು ರಾಜ್ಯಪಾಲರ ವಾದವಾಗಿದೆ.