ಬೆಂಗಳೂರು,ಜು.11- ದೋಸ್ತಿ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿರುವ ಬೆನ್ನಲ್ಲೇ ಇನ್ನಷ್ಟು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಒಂದು ವೇಳೆ ನಿರೀಕ್ಷೆಯಂತೆ ಇಂದು ಸಂಜೆಯೊಳಗೆ ನಾಲ್ವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ವಿಧಾನಸಭೆಯಲ್ಲಿ ದೋಸ್ತಿಗಳ ಬಲ 95ಕ್ಕೆ ಕುಸಿಯಲಿದೆ.
ಶಾಸಕರಾದ ಸೌಮ್ಯರೆಡ್ಡಿ(ಜಯನಗರ), ಸುಬ್ಬಾರೆಡ್ಡಿ(ಬಾಗೇಪಲ್ಲಿ), ಮಹಾಂತೇಶ್ ಕೌಜಲಗಿ(ರಾಯಭಾಗ) ಹಾಗೂ ಅಂಜಲಿ ನಿಂಬಾಳ್ಕರ್(ಖಾನಾಪುರ) ಅವರುಗಳು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿನ್ನೆಯೇ ಇವರೆಲ್ಲರೂ ರಾಜೀನಾಮೆ ನೀಡಲಿದ್ದಾರೆ ಎಂಬ ವದ್ದಂತಿ ಕೇಳಿಬಂದಿತ್ತು.ಆದರೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಹೊಸಪೇಟೆಯ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿದ ನಂತರ ಭಾರೀ ಹೈಡ್ರಾಮಾ ನಡೆದಿತ್ತು.
ಹೀಗಾಗಿ ಕೊನೆ ಕ್ಷಣದಲ್ಲಿ ಈ ಎಲ್ಲ ಶಾಸಕರು ತಮ್ಮ ಮನಸ್ಸು ಬದಲಿಸಿ ಇಂದು ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಬಿಟಿಎಂ ಲೇಔಟ್ನ ಶಾಸಕ ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟಿದ್ದಾರೆ. ಅವರ ಪುತ್ರಿ, ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಅವರೂ ತಂದೆಯ ಹಾದಿಯನ್ನೇ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಖಾನಾಪುರದ ಶಾಸಕ ಅಂಜಲಿ ನಿಂಬಾಳ್ಕರ್ ಕೂಡ ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಪುಕಾರು ಕೂಡ ಹಬ್ಬಿದೆ. ಇದರಿಂದಾಗಿಯೇ ನಿನ್ನೆ ರಾಜ್ಯ ಸರ್ಕಾರ ಅವರ ಪತಿ ಐಜಿಪಿ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಅಂಜಲಿ ನಿಂಬಾಳ್ಕರ್ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಯುವಂತೆ ಅವರ ಪತಿಯಿಂದ ಅಂಜಲಿ ಅವರಿಗೆ ಒತ್ತಡ ಹಾಕಲಾಗಿತ್ತು.ಆದರೆ ಅವರು ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಮಹಂತೇಶ್ ಕೌಜಲಗಿ ಕಳೆದ ಹಲವು ದಿನಗಳಿಂದ ಬಿಜೆಪಿಯ ಸಂಪರ್ಕದಲ್ಲಿದ್ದು, ಯಾವುದೇ ಕ್ಷಣದಲ್ಲೂ ಬಿಜೆಪಿ ಸೇರ್ಪಡೆಯಾಗುವ ಸಂಭವವಿದೆ.