ಬೆಂಗಳೂರು, ಜು.11- ಆಡಳಿತ ಪಕ್ಷದ ಶಾಸಕರ ಸಾಲು ಸಾಲು ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನದಂಚಿಗೆ ಸಾಗುತ್ತಿದ್ದು, ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅತೃಪ್ತ ಶಾಸಕರು ತೀವ್ರ ಅಸಮಾಧಾನ ಹೊರ ಹಾಕುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಮಾಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹೇಗಾದರು ಮಾಡಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿರುವ ನಾಯಕರು ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟು, ಉಪಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ಗೆ ವಹಿಸುವ ನಿಟ್ಟಿನಲ್ಲಿ ಅತೃಪ್ತಿಯನ್ನು ನಿವಾರಣೆ ಮಾಡುವ ಚರ್ಚೆಗಳು ನಡೆದಿದ್ದು, ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಬ್ನಬಿ ಆಜಾದ್, ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂತಾದವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ, ಜೆಡಿಎಸ್ಗೆ ಉಪಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ ಎಂದು ಜೆಡಿಎಸ್ ವರಿಷ್ಠರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಕಾಂಗ್ರೆಸ್ ಶಾಸಕರ ಇತ್ತೀಚಿನ ನಡವಳಿಕೆಯಿಂದ ಮುಖ್ಯಮಂತ್ರಿ ಬೇಸತ್ತಿದ್ದು, ಕಾಂಗ್ರೆಸ್ನೊಂದಿಗಿನ ಸಖ್ಯವನ್ನು ಕಳೆದುಕೊಳ್ಳುವುದೇ ಲೇಸು ಎಂಬ ಬಗ್ಗೆಯೂ ಗಂಭೀರ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ವರಿಷ್ಠರು ಬಿಜೆಪಿಯ ರಾಷ್ಟ್ರಮಟ್ಟದ ನಾಯಕರೊಂದಿಗೆ ತಡರಾತ್ರಿವರೆಗೂ ಮಾತುಕತೆ ನಡೆಸಿದ್ದು, ಬಿಜೆಪಿ ಸರ್ಕಾರ ರಚಿಸುವುದಾದರೆ ಜೆಡಿಎಸ್ ಬೇಷರತ್ ಬೆಂಬಲ ಕೊಡಲು ಸಿದ್ಧವಿದೆ ಎಂಬ ಸಂದೇಶವನ್ನು ಕೂಡ ರವಾನಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಅತೃಪ್ತ ಶಾಸಕರ ರಾಜೀನಾಮೆಯಿಂದ ತೀವ್ರ ಅಸಮಾಧಾನಕ್ಕೊಳಗಾಗಿರುವ ಜೆಡಿಎಸ್ ನಾಯಕರು ಪರ್ಯಾಯ ಮಾರ್ಗದ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದು, ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿಗೆ ಬೇಷರತ್ ಬೆಂಬಲ ನೀಡಿ ಪಕ್ಷ ಸಂಘಟನೆಯತ್ತ ಗಮನ ಹರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ನೀಡಿರುವ ಅತೃಪ್ತರು ಯಾವುದೇ ಮನವೊಲಿಸುವ ಪ್ರಯತ್ನಕ್ಕೆ ಮಣಿಯದೆ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಶಾಸಕರ ರಾಜೀನಾಮೆ ಸಾಲು ಸಾಲಾಗಿ ಮುಂದುವರೆಯುತ್ತಿದೆ. ಸಚಿವರ ರಾಜೀನಾಮೆ ಪಡೆದು ಸಂಪುಟ ಪುನಾರಚನೆ ಮಾಡುವ ಭರವಸೆ ನೀಡಿದ್ದರೂ ಮಣಿಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನೊಂದಿಗಿನ ಮೈತ್ರಿ ಮುಂದುವರೆಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಬಗ್ಗೆಯೂ ಜೆಡಿಎಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ.
ಈ ಎರಡೂ ಪರ್ಯಾಯ ಮಾರ್ಗಗಳಲ್ಲಿ ಕೊನೆಗಳಿಗೆಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಥವಾ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.