ಮ್ಯಾಂಚೆಸ್ಟರ್ ನಲ್ಲಿ ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅಲ್ಪ ಮೊತ್ತದ ಹೊರತಾಗಿಯೂ ತನ್ನ ಅದ್ಭುತ ಸಾಂಘಿಕ ಹೋರಾಟದಿಂದ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ.
ಇಂದು ಸೆಮಿ ಫೈನಲ್ ಪಂದ್ಯ ನಡೆದ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನ ನ್ಯೂಜಿಲೆಂಡ್ ಪಾಲಿಗೆ ಮೊದಲಿನಿಂದಲೂ ದುರಾದೃಷ್ಟದ ಮೈದಾನವೆಂದೇ ಕುಖ್ಯಾತಿ ಪಡೆದಿದೆ. ಕಾರಣ ಈ ಮೈದಾನದಲ್ಲಿ ಈ ಹಿಂದೆ ನ್ಯೂಜಿಲೆಂಡ್ ತಂಡ ಆಡಿದ್ದ ಎರಡು ಸೆಮಿ ಫೈನಲ್ ಪಂದ್ಯಗಳಲ್ಲಿ ಕಿವೀಸ್ ಪಡೆ ಹೀನಾಯ ಸೋಲು ಕಂಡಿತ್ತು. 1979ರಲ್ಲಿ ಮೊದಲ ಬಾರಿಗೆ ಈ ಮೈದಾನದಲ್ಲಿ ನ್ಯೂಜಿಲೆಂಡ್ ತಂಡ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ 9 ರನ್ ಗಳ ರೋಚಕ ಜಯ ಸಾಧಿಸಿತ್ತು.
ಅಂದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ನಿಗದಿತ 60 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ತಂಡ 60 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಕೇವಲ 9 ರನ್ ಅಂತರದಲ್ಲಿ ಕಿವೀಸ್ ತಂಡ ಸೋಲು ಕಂಡಿತ್ತು.
ಇದಾದ ಬಳಿಕ 1999ರ ವಿಶ್ವಕಪ್ ಟೂರ್ನಿಯಲ್ಲೂ ನ್ಯೂಜಿಲೆಂಡ್ ತಂಡ ತಮ್ಮ ಸೆಮಿ ಫೈನಲ್ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿತ್ತು. ಅಂದು ಪಾಕಿಸ್ತಾನದ ವಿರುದ್ಧ 9 ವಿಕೆಟ್ ಹೀನಾಯ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ಸೈಯ್ಯದ್ ಅನ್ವರ್ ಅವರ ಅಮೋಘ ಶತಕ (ಅಜೇಯ 113) ಮತ್ತು ವಜಾಹತುಲ್ಲಾ ವಾಸ್ತಿ (84 ರನ್) ಅವರ ಅದ್ಭುತ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಆ ಬಳಿಕ ಮತ್ತೆ ನಿನ್ನೆ ನ್ಯೂಜಿಲೆಂಡ್ ತಂಡ ತನ್ನ ಮೊದಲ ಬ್ಯಾಟಿಂಗ್ ವೇಳೆ ಭಾರತದ ಸಾಂಘಿಕ ಬೌಲಿಂಗ್ ಪ್ರದರ್ಶನದ ಪರಿಣಾಮ 239ರನ್ ಗಳ ಅಲ್ಪ ಮೊತ್ತಕ್ಕೆ ಕುಸಿಯಿತು. ಅದಾಗಲೇ ಕ್ರಿಕೆಟ್ ಪಂಡಿತರು ಈ ಮೈದಾನ ನ್ಯೂಜಿಲೆಂಡ್ ಪಾಲಿಗೆ ದುರಾದೃಷ್ಟದ ಮೈದಾನ ಎಂದು ವಿಶ್ಲೇಷಿಸಿದ್ದರು. ಆದರೆ ನ್ಯೂಜಿಲೆಂಡ್ ತಂಡ ಇಂದು ತನ್ನ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ತಬ್ಬಿಬ್ಬು ಮಾಡಿ 18 ರನ್ ಗಳ ಭರ್ಜರಿ ಜಯ ಸಾಧಿಸಿತು.