ಬೆಂಗಳೂರು; ರಾಜ್ಯ ಸಮ್ಮಿಶ್ರ ಸರ್ಕಾರ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿರುವ ಪರಿಣಾಮ ರಾಜ್ಯ ರಾಜಕೀಯದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿಯಿಂದ ಇನ್ನಿಲ್ಲದ ಒತ್ತಡ ಸೃಷ್ಟಿಯಾಗಿದೆ. ಹೀಗಾಗಿ ಗುರುವಾರ ಅಥವಾ ಶುಕ್ರವಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಅನುಮಾನಕ್ಕೆ ಇಂಬು ನೀಡುವಂತಿದೆ ಅವರ ಈ ವರ್ತನೆ.
ಸಿಎಂ ಪ್ರೋಟೋಕಾಲ್ ಪ್ರಕಾರ ಬೆಂಗಾವಲು ಪಡೆ ಇಲ್ಲದೆ ಮುಖ್ಯಮಂತ್ರಿಯಾದವರು ಎಲ್ಲಿಯೂ ತೆರಳುವಂತಿಲ್ಲ. ಆದರೆ, ಕಳೆದ ಮೂರು ದಿನಗಳಿಂದ ಕುಮಾರಸ್ವಾಮಿ ಬೆಂಗಾವಲು ಪಡೆಯನ್ನು ಉಪಯೋಗಿಸುತ್ತಲೇ ಇಲ್ಲ. ಎಲ್ಲೇ ಹೋದರೂ ಒಬ್ಬರೇ ಓಡಾಡುತ್ತಿದ್ದಾರೆ. ಜೆಡಿಎಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ತಡೆಯಲು ಅವರನ್ನು ದೇವನಹಳ್ಳಿ ಬಳಿಯ ರೆಸಾರ್ಟ್ನಲ್ಲಿ ಉಳಿಸಲಾಗಿದೆ.
ಇಂದು ಬೆಳಗ್ಗೆ ಅವರನ್ನು ನೋಡಲು ತಾಜ್ ವೆಸ್ಟೆಂಡ್ ಹೋಟೆಲ್ನಿಂದ ಹೊರಟ ಕುಮಾರಸ್ವಾಮಿ ಬೆಂಗಾವಲು ವಾಹನಗಳನ್ನು ಬಿಟ್ಟು ಕೇವಲ ತನ್ನ ಕಾರಿನಲ್ಲಿ ಹೊರಟಿದ್ದಾರೆ. ಇವನ್ನೆಲ್ಲ ಗಮನಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರು ತಮಗೆ ನೀಡಲಾಗಿರುವ ಎಲ್ಲಾ ಸವಲತ್ತುಗಳನ್ನು ಹಿಂದಿರುಗಿಸಿದ್ದಾರೆಯೇ? ಎಂಬ ಅನುಮಾನವನ್ನು ಹುಟ್ಟುಹಾಕಿದೆ.