ಬೆಂಗಳೂರು, ಜು.11- ಕಾಂಗ್ರೆಸ್ ಪಕ್ಷದ ಶಾಸಕರು ಸಾಲು ಸಾಲು ರಾಜೀನಾಮೆ ನೀಡಿ ಮೈತ್ರಿ ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ಯುತ್ತಿರುವ ಸಂದರ್ಭದಲ್ಲೇ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಆಡಳಿತಾರೂಢ ಜೆಡಿಎಸ್ ಪಕ್ಷ ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗಿದೆ.
ನಿನ್ನೆ ತಡರಾತ್ರಿವರೆಗೂ ಜೆಡಿಎಸ್ ಹಾಗೂ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದು, ಉಭಯ ಪಕ್ಷಗಳು ತಮ್ಮೆಲ್ಲ ಹಿಂದಿನ ಮನಸ್ತಾಪಗಳನ್ನು ಬದಿಗೊತ್ತಿ ಹೊಸದಾಗಿ ಮೈತ್ರಿ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅತೃಪ್ತಗೊಂಡಿರುವ ಶಾಸಕರ ಮನವೊಲಿಸುವ ನಿರಂತರ ಪ್ರಯತ್ನಗಳು ಫಲ ಕೊಟ್ಟಿಲ್ಲ. ಮೈತ್ರಿ ಸರ್ಕಾರದ ಎಲ್ಲ ಸಚಿವರ ರಾಜೀನಾಮೆ ಕೊಡಿಸಿ ಸಂಪುಟ ಪುನಾರಚನೆ ಮಾಡುವುದಾಗಿ ಘೊಷಿಸಲಾಗಿದೆ.ಪುನಾರಚನೆ ಸಂದರ್ಭದಲ್ಲಿ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದರೂ ಯಾರೂ ಕೂಡ ಮಣಿಯುತ್ತಿಲ್ಲ. ಬದಲಾಗಿ ಸಚಿವರಾಗಿದ್ದವರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತ ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ಯುತ್ತಿದ್ದಾರೆ.ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಪರಿಸ್ಥಿತಿ ಕೈ ಮೀರುತ್ತಿರುವ ಸಂದರ್ಭದಲ್ಲೇ ಪರ್ಯಾಯ ಮಾರ್ಗದತ್ತ ಜೆಡಿಎಸ್ ನಾಯಕರು ಗಮನ ಹರಿಸಿದ್ದಾರೆ.
ನಿನ್ನೆ ತಡರಾತ್ರಿವರೆಗೂ ಜೆಡಿಎಸ್ ನಾಯಕರು ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದು, ಮತ್ತೆ ಉಭಯ ಪಕ್ಷಗಳು ಸೇರಿ ಸರ್ಕಾರ ರಚಿಸುವ ಇಂಗಿತ ವ್ಯಕ್ತಪಡಿಸಲಾಗಿದೆ.ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರು ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗುವುದನ್ನು ತಪ್ಪಿಸಲು ಬಿಜೆಪಿ ಸರ್ಕಾರ ರಚಿಸುವುದಾದರೆ ಬೇಷರತ್ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದೆಡೆ ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನಗಳನ್ನು ಮೇಲ್ನೋಟಕ್ಕೆ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎನಿಸಿದರೂ ಪರೋಕ್ಷವಾಗಿ ಶಾಸಕರ ರಾಜೀನಾಮೆಗೆ ಆ ಪಕ್ಷದ ನಾಯಕರೇ ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನೊಂದಿಗಿನ ಮೈತ್ರಿಯನ್ನು ಮುಂದುವರಿಸಿದ್ದೇ ಆದರೆ ಜೆಡಿಎಸ್ ಪಕ್ಷ ಭವಿಷ್ಯದಲ್ಲಿ ಗಂಡಾಂತರ ಎದುರಿಸಬೇಕಾಗುತ್ತದೆ.ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.ಈ ಸಂದರ್ಭದಲ್ಲಿ ಚುನಾವಣೆಗೆ ಹೋದರೂ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ಹಾಗಾಗಿ ಬಿಜೆಪಿಗೆ ಬೇಷರತ್ ಬೆಂಬಲ ಕೊಡುವುದೇ ಸೂಕ್ತ ಎಂಬ ನಿರ್ಧಾರಕ್ಕೂ ಬಂದಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರರೊಬ್ಬರು ದೆಹಲಿಯ ಬಿಜೆಪಿ ನಾಯಕರೊಂದಿಗೆ ತಡರಾತ್ರಿ ಸಮಾಲೋಚನೆ ನಡೆಸಿ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಬೇಷರತ್ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಆದರೆ, ಬಿಜೆಪಿಯಿಂದ ಈ ಬಗ್ಗೆ ಖಚಿತ ಭರವಸೆ ಸಿಕ್ಕಿರುವ ಮಾಹಿತಿ ಲಭ್ಯವಾಗಿಲ್ಲ.