ಜೀವಂತ ಬಾಂಬ್ ಕದ್ದ ಗ್ರಾಮಸ್ಥರು-ಅದರಲ್ಲಿರುವ ಲೋಹಗಳ ಹೊರತೆಗೆಯುವ ವೇಳೆ ಬಾಂಬ್ ಸ್ಪೋಟ -ಘಟನೆಯಲ್ಲಿ ಇಬ್ಬರ ಸಾವು

ಅಹಮದ್‍ನಗರ್, ಜು.10 – ಸೇನಾ ಶಿಬಿರದಲ್ಲಿದ್ದ ಬಾಂಬ್ ಕದ್ದು ಅದರಲ್ಲಿನ ಲೋಹಗಳನ್ನು ಗುಜರಿಗೆ ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದ ಇಬ್ಬರು ಯುವಕರು ಅದೇ ಸ್ಫೋಟಕದ ಭಾರೀ ಸ್ಫೋಟದಿಂದ ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಹಮದ್‍ನಗರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಖರೆ ಖರ್ಜುನೆ ಗ್ರಾಮದಲ್ಲಿ 4ರ ನುಸುಕಿನಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಪಿ.ಎಸ್. ದತಲೆ ತಿಳಿಸಿದ್ದಾರೆ.

ಅಕ್ಷಯ್ ನವನಾಥ್ ಗಾಯಕ್‍ವಾಡ್(19) ಮತ್ತು ಸಂದೀಪ್ ಭಾವುಸಾಹೇಬ್ ಥಿರೋಡ್(34) ಎಂಬ ಗ್ರಾಮಸ್ಥರು ಬಾಂಬ್ ಸ್ಫೋಟದಲ್ಲಿ ಹತರಾಗಿದ್ದಾರೆ.

ಇವರಿಬ್ಬರು ತಮ್ಮ ಗ್ರಾಮದ ಬಳಿ ಇದ್ದ ಆರ್ಮಿ ಫೈರಿಂಗ್ ರೇಂಜ್(ಸೇನಾ ಬಂದೂಕು ಅಭ್ಯಾಸ ಸ್ಥಳ)ದಲ್ಲಿದ್ದ ಜೀವಂತ ಬಾಂಬ್‍ನನ್ನು ಕದ್ದರು.

ಅದರಲ್ಲಿದ್ದ ಬೆಲೆಬಾಳುವ ಲೋಹವನ್ನು ಗುಜರಿಯಲ್ಲಿ ಮಾರಾಟ ಮಾಡಿ ಹಣ ಗಳಿಸುವುದು ಇವರ ಉದ್ದೇಶವಾಗಿತ್ತು.

ಅದರಂತೆ ಇಂದು ನಸುಕಿನಲ್ಲಿ ಬಾಂಬ್‍ನನ್ನು ಗಾಯಕ್‍ವಾಡ್ ಮನೆಗೆ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಲೋಹವನ್ನು ಹೊರತೆಗೆಯಲು ಯತ್ನಿಸಿದರು.

ಈ ಸಂದರ್ಭದಲ್ಲಿ ಭಾರೀ ಶಬ್ಧದೊಂದಿಗೆ ಬಾಂಬ್ ಸ್ಪೋಟಗೊಂಡು ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಸ್ಫೋಟದ ತೀವ್ರತೆಗೆ ಅವರಿಬ್ಬರ ದೇಹಗಳು ಛಿದ್ರ ಛಿದ್ರವಾಗಿದ್ದು, ಮನೆ ಬಹುತೇಕ ಧ್ವಂಸಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ