ನವದೆಹಲಿ, ಜು.10– ಭಾರತೀಯ ರೈಲ್ವೆಯಲ್ಲಿ 2.94 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಈ ಮಾಹಿತಿ ನೀಡಿದ ಸಚಿವರು, ಸೂಕ್ತ ಮಾನದಂಡ ಮತ್ತು ಅರ್ಹತೆ ಆಧಾರದ ಮೇಲೆ ಈ ಹುದ್ದೆಗಳಿಗೆ ಭರ್ತಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 4.61 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಖಾಲಿ ಇರುವ 2.94 ಲಕ್ಷ ನೌಕರಿಗಳಿಗೆ ನೇಮಕ ಕಾರ್ಯ ಪ್ರಗತಿಯಲ್ಲಿದೆ ಎಂದರು.
ರೈಲ್ವೆ ಆಧುನೀಕರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಕ್ಟೋಬರ್ ತಿಂಗಳಿನಿಂದ ಪ್ರಯಾಣಿಕರಿಗೆ ಹಸಿರು ತಂತ್ರಜ್ಞಾನದೊಂದಿಗೆ ಪ್ರತಿ ದಿನ 4 ಲಕ್ಷ ಬರ್ತ್ಗಳ ಸೌಲಭ್ಯ ಕಲ್ಪಿಸುವುದಾಗಿ ಅವರು ಮಾಹಿತಿ ನೀಡಿದರು.
ರೈಲುಗಳ ದೀಪ ಮತ್ತು ಹವಾನಿಯಂತ್ರಿತ ವ್ಯವಸ್ಥೆಗಾಗಿ ಪವರ್ಕಾರ್ಗಳ ಬದಲಿಗೆ ಎಂಜಿನ್ನಿಂದಲೇ ವಿದ್ಯುತ್ ಉತ್ಪಾದಿಸುವ ಹೊಸ ತಂತ್ರಜ್ಞಾನ ಕಾರ್ಯಗತವಾಗಲಿದೆ ಎಂದು ಗೋಯಲ್ ತಿಳಿಸಿದರು.