ಹೆಚ್ಚಿನ ಅನುದಾನ ನೀಡದಿದ್ದರೆ ಸಚಿವರಾಗಿ ಮುಂದುವರೆಯುವುದಿಲ್ಲ-ರಹೀಂಖಾನ್

ಬೆಂಗಳೂರು, ಜು.10- ಯುವಜನ ಮತ್ತು ಸೇವಾ ಇಲಾಖೆಗೆ ಹೆಚ್ಚಿನ ಅನುದಾನ ನೀಡದೇ ಇದ್ದರೆ ತಾವು ಸಚಿವರಾಗಿ ಮುಂದುವರೆಯುವುದಿಲ್ಲ ಎಂದು ಹೇಳಿರುವ ರಹೀಂಖಾನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುಮಾರಕೃಪ ಅತಿಥಿ ಗೃಹದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ಆಂಧ್ರಪ್ರದೇಶದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ 1600 ಕೋಟಿ ರೂ.ಗಳ ಅನುದಾನ ಇದೆ. ನಮ್ಮ ರಾಜ್ಯದಲ್ಲಿ ಕೇವಲ ಆರು ಕೋಟಿ ಮಾತ್ರ ಅನುದಾನ ನೀಡಲಾಗಿದೆ.ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದೆ. ಶೇ.50ಕ್ಕಿಂತ ಹೆಚ್ಚು ಯುವಜನರಿರುವ ನಮ್ಮ ರಾಜ್ಯದಲ್ಲಿ ಕ್ರೀಡೆ ಮತ್ತು ಯುವ ಜನ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಹೆಚ್ಚಿನ ಅನುದಾನ ಬೇಕು. ಹಲವಾರು ಕಡೆ ಕ್ರೀಡಾಂಗಣ, ಈಜುಕೊಳಗಳ ನಿರ್ಮಾಣ ಅರ್ಧಕ್ಕೆ ನಿಂತಿದೆ. ಹೊಸ ನಿರ್ಮಾಣಗಳಿಗೂ ಬೇಡಿಕೆ ಬರುತ್ತಿದೆ. ಅದನ್ನು ನಿಭಾಯಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅನುದಾನ ಹೆಚ್ಚಳ ಮಾಡಿ ಎಂದು ಹಲವಾರು ಬಾರಿ ಮನವಿ ಮಾಡಿದ್ದೇನೆ. ಅದಕ್ಕೆ ಸ್ಪಂದನೆ ಸಿಗದಿದ್ದಾಗ ಬೇಸರವಾಯಿತು ಎಂದರು.

ಕಳೆದ ಆರು ತಿಂಗಳ ಹಿಂದೆ ಸಚಿವನಾದ ನನಗೆ ಇಲಾಖೆಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಇತ್ತೀಚೆಗೆ ಚರ್ಚೆ ನಡೆಸಿದಾಗ ನೀವು ನಿರೀಕ್ಷೆ ಮಾಡಿದ್ದಕ್ಕಿಂತಲೂ ದುಪ್ಪಟ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅನುದಾನ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದೇನೆ.

ಒಂದು ವೇಳೆ ಅನುದಾನ ಸಿಗದೇ ಇದ್ದಾರೆ ಈಗಾಗಲೇ ಎಲ್ಲಾ ಸಚಿವರು ರಾಜೀನಾಮೆ ನೀಡಿದಂತೆ ನಾನೂ ನೀಡಿದ್ದೇನೆ. ಅದನ್ನು ಹಿಂಪಡೆಯದೆ ಸಚಿವ ಸ್ಥಾನ ಬಿಟ್ಟುಬಿಡುತ್ತೇನೆ ಎಂದು ಹೇಳಿದರು.

ಈ ಮೊದಲು ಯಡಿಯೂರೂಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದರು. ಆಗ ನಾನು ಒಪ್ಪಿರಲಿಲ್ಲ.ಇತ್ತೀಚೆಗೆ ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ ಎಂದು ರಹೀಂಖಾನ್ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ