ಮುಂಬೈ: ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರಿಗೆ ಅವಮಾನ ಮಾಡುವ ದೃಷ್ಟಿಯಿಂದ ಹೀಗೆ ಮಾಡುತ್ತಿಲ್ಲ. ಇದು ರಾಜಕಾರಣ. ವಿಶ್ವಾಸ ಬೇರೆ, ರಾಜಕಾರಣ ಬೇರೆ. ಹೀಗಾಗಿ ದಯವಿಟ್ಟು ಮುಂಬೈನಲ್ಲಿ ಶಿವಕುಮಾರ್ ಅವರಿಗೆ ಯಾವ ರೀತಿಯ ಅವಮಾನ ಕೂಡ ಆಗಬಾರದು. ಅದನ್ನು ನಾವು ಕೂಡ ಸಹಿಸಲ್ಲ ಎಂದು ಅತೃಪ್ತ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಮುಂಬೈ ಹೋಟೆಲ್ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದ ವಿಷಯದಲ್ಲಿ ಸದ್ಯಕ್ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಇಷ್ಟು ಉನ್ನತ ಸ್ಥಾನಕ್ಕೆ ನಮ್ಮನ್ನು ಶಿವಕುಮಾರ್ ಅವರೇ ಕರೆತಂದಿದ್ದು, ರಾಜಕಾರಣದಲ್ಲಿ ಏನೆಲ್ಲ ಸಹಾಯ ಮಾಡಬೇಕೋ ಅವರು ಮಾಡಿದ್ದಾರೆ. ಆ ದೃಷ್ಟಿಯಿಂದ ಶಿವಕುಮಾರ್ ಸೇರಿದಂತೆ ಯಾರನ್ನೂ ಭೇಟಿ ಮಾಡಲ್ಲ ಎಂದು ಮಾಧ್ಯಮಗಳ ಮೂಲಕ ತಿಳಿಸಿದ್ದೇವೆ. ಹೀಗಾಗಿ ನಾವು ಮಾತುಕತೆಗೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಸರಿನೋ, ತಪ್ಪೋ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿದ್ದೇವೆ. ನಾವು ರಾಜಕೀಯ ದೃಷ್ಟಿಯಿಂದ ಯಾರನ್ನೂ ಭೇಟಿಯಾಗುವುದಿಲ್ಲ. ಹೀಗಾಗಿ ಯಾರೂ ಬರುವುದು ಬೇಡ ಎಂದು ಮಂಗಳವಾರವೇ ಮಾಧ್ಯಮಗಳಿಗೆ ಹೇಳಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿಗೆ ಬಂದ ನಂತರ ಮೊದಲೇ ಶಿವಕುಮಾರ್ ಅವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ಹೇಳುವ ಕೆಲಸ ಮಾಡುತ್ತೇವೆ. ದಯವಿಟ್ಟು ಮುಂಬೈನಲ್ಲಿ ಶಿವಕುಮಾರ್ ಅವರಿಗೆ ಯಾವ ರೀತಿಯ ಅವಮಾನ ಕೂಡ ಆಗಬಾರದು. ಅದನ್ನು ನಾವು ಕೂಡ ಸಹಿಸಲ್ಲ ಎಂದು ಸೋಮಶೇಖರ್ ತಿಳಿಸಿದರು.
ಬಿಜೆಪಿಯ ಇಬ್ಬರು ನಾಯಕರು ಅತೃಪ್ತರನ್ನು ಬೇಟಿ ಮಾಡಲು ಮುಂಬೈಗೆ ತೆರಳುತ್ತಿದ್ದಂತೆಯೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇಗೌಡ ಮುಂಬೈನತ್ತ ಪ್ರಯಾಣ ಬೆಳೆಸಿದ್ದರು. ಆದರೆ ಅವರು ಮುಂಬೈ ತಲುಪುತ್ತಿದ್ದಂತೆಯೇ ಹೋಟೆಲ್ ಸುತ್ತಮುತ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಯಿತು. ಕಾಂಗ್ರೆಸ್ ನಾಯಕರು ಹೋಟೆಲ್ ಬಳಿ ಬರುತ್ತಿದ್ದಂತೆಯೇ ಮುಂಬೈ ಪೊಲೀಸರು ಅವರನ್ನು ತಡೆದಿದ್ದಾರೆ. ಆದರೆ ಹೋಟೆಲ್ ಒಳಗಡೆ ಹೋಗಲು ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ.