ಬೆಂಗಳೂರು: ಸರ್ಕಾರ ಒಂದು ಕುಟುಂಬ ಇದ್ದಂತೆ. ಮನೆ ಯಜಮಾನ ಸರಿಯಾಗಿರಬೇಕು. ಯಜಮಾನನೇ ಸರಿಯಿಲ್ಲ ಎಂದರೆ ಕುಟುಂಬ ಹೇಗೆ ಸರಿ ಇರುತ್ತೆ ಎಂದು ಪ್ರಶ್ನಿಸುವ ಮೂಲಕ ಎಂಟಿಬಿ ನಾಗರಾಜ್ ನೇರವಾಗಿಯೇ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವ ಹೆಚ್.ಡಿ ರೇವಣ್ಣರಿಂದಲೇ ಮೈತ್ರಿ ಸರ್ಕಾರಕ್ಕೆ ಈ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಜೆಡಿಎಸ್ ನವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅವರಿಗೆ ಇಷ್ಟ ಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಅವರ ಆಡಳಿತದಿಂದ ಬೇಸತ್ತು ಅತೃಪ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ಸಿಎಂ ಹೇಳೋದು ಒಂದು, ಮಾಡೋದು ಇನ್ನೊಂದು. ರೇವಣ್ಣ ಅವರ ಮಾತು ಕೇಳಿಯೇ ಸಿಎಂ ಕೆಟ್ಟರು. ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅತೃಪ್ತ ಶಾಸಕರು ದುಡ್ಡಿಗಾಗಿ ಹೋದವರಲ್ಲ ಅವರ ಬಳಿ ಹಣವಿದೆ. ಅತೃಪ್ತರನ್ನು ಮನವೊಲಿಸಿ ಸಚಿವ ಡಿಕೆ ಶಿವಕುಮಾರ್ ಅವರು ಕರೆತರುತ್ತಾರೆ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ನಾನು ಭಿಕ್ಷೆ ನೀಡಿದ್ದೇನೆ ಹೊರತು ಬೇಡಿಲ್ಲ. ಕಾಂಗ್ರೆಸ್ ಬಿಡಲ್ಲ ಬಿಜೆಪಿಗೆ ಹೋಗಲ್ಲ ಎಂದಯ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾಗಬೇಕು ಎಂದು ಹೇಳುತ್ತಿಲ್ಲ. ಅವರೇ ಪೂರ್ಣ ಅವಧಿಗೆ ಸಿಎಂ ಆಗಿರಲಿ, ಆದರೆ ಅವರ ಆಡಳಿತ ವೈಖರಿ ಬದಲಾಗಬೇಕು. ಎಲ್ಲಾ ಇಲಾಖೆಗಳಲ್ಲೂ ಸಿಎಂ ಹಾಗೂ ರೇವಣ್ಣ ಕೈ ಆಡಿಸ್ತಾರೆ. ಜೆಡಿಎಸ್ ಅವರಿಗೆ ಒಂದು ರೀತಿ, ಕಾಂಗ್ರೆಸ್ ಅವರಿಗೆ ಒಂದು ರೀತಿ ಮಾಡುತ್ತಾರೆ. ಸಚಿವರು, ಶಾಸಕರು ಸಿಎಂ ಬಳಿ ಹೋದರೆ ಅವರು ಸರಿ ಪ್ರತಿಕ್ರಿಯಿಸಲ್ಲ. ಶಾಸಕರು ಕ್ಷೇತ್ರ ಅಭಿವೃದ್ಧಿ ಬಗ್ಗೆ ಕೇಳಿದರೆ ಸರಿಯಾಗಿ ಸ್ಪಂದಿಸಲ್ಲ. ಹೀಗಾಗಿ ಸಿಎಂ ಅವರ ಪಕ್ಷಭೇದ ಆಡಳಿತ ನೋಡಿ ಬೇಸತ್ತ ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ. ನನಗೂ ಬೇಸರವಿದೆ, ಆದರೆ ನಾನು ಪಕ್ಷ ಬಿಡಲ್ಲ. ಇನ್ನಾದರೂ ಸಿಎಂ ಅವರು ಮೈತ್ರಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಪಕ್ಷಭೇದ ಮರೆತು ಕೆಲಸ ಮಾಡಲಿ ಎಂದು ಅಸಮಾಧಾನ ಹೊರಹಾಕಿದರು.
ಜೆಡಿಎಸ್ ಅಧ್ಯಕ್ಷರೇ ಮುಂಬೈಗೆ ಹೋಗಿದ್ದಾರೆ. ಈಗಲಾದರೂ ಸಿಎಂ ತಮ್ಮ ತಪ್ಪು ಅರಿತುಕೊಳ್ಳಲಿ. ಬಸವರಾಜು, ಸೋಮಶೇಖರ್ ಹತ್ತಿರ ಮಾತನಾಡಿದ್ದೇನೆ.
ಸಿಎಂಗಿಂತ ಡಿಕೆಶಿ ಅವರು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ ಅವರೂ ಸಹ ಅತೃಪ್ತರನ್ನು ಕರೆತರುವ ಕೆಲಸ ಮಾಡುತ್ತಿದ್ದಾರೆ. ಪಕ್ಷಪಾತ ಬಿಟ್ಟರೆ ಮಾತ್ರ ಸರ್ಕಾರ ಉಳಿಯುತ್ತದೆ ಎಂದು ಸಿಎಂ ಅವರಿಗೆ ಎಂಟಿಬಿ ಸಲಹೆ ನೀಡಿದರು.