ಬೆಂಗಳೂರು, ಜು.10- ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಗೋಪಾಲಯ್ಯ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಒತ್ತಾಯಿಸಿದೆ.
ಮಾಜಿ ಉಪಮೇಯರ್ ಎಸ್.ಹರೀಶ್, ಬಿಬಿಎಂಪಿ ಮಾಜಿ ಸದಸ್ಯ ಎಂ.ನಾಗರಾಜ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಜೆಪಿ ಮುಖಂಡ ಪ್ರಸನ್ನ ಮತ್ತಿತರ ಮಂಡಲ ಪದಾಧಿಕಾರಿಗಳು ಇಂದು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಶಾಸಕ ಕೆ.ಗೋಪಾಲಯ್ಯ ಅವರು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತ ಶಾಸಕರೊಂದಿಗೆ ಮುಂಬೈಗೆ ತೆರಳಿದ ಬೆನ್ನಲ್ಲೇ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳು ನಿನ್ನೆ ಸಭೆ ನಡೆಸಿ ಗೋಪಾಲಯ್ಯ ಸೇರ್ಪಡೆಯಿಂದ ಪಕ್ಷಕ್ಕೆ ಆಗುವ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಬಿಜೆಪಿ ಮುಖಂಡರುಗಳು ಗೋಪಾಲಯ್ಯ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಹೀಗಾಗಿ ಅವರನ್ನು ಬಿಜೆಪಿಗೆ ಕರೆತರುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಒಮ್ಮತಾಭಿಪ್ರಾಯದಂತೆ ಕೆ.ಗೋಪಾಲಯ್ಯ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳದಂತೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಬಿಜೆಪಿ ಪಕ್ಷದ ವರಿಷ್ಠರ ಗಮನಕ್ಕೆ ತರಲು ತೀರ್ಮಾನಿಸಿ ಇಂದು ಮಾಜಿ ಉಪಮೇಯರ್ ಹರೀಶ್ ಮತ್ತಿತರರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಗೋಪಾಲಯ್ಯ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ.