‘ಹೋಟೆಲ್ ಒಳಗೆ ಹೋಗೋದು ಹೋಗೋದೆ, ಅದ್ಯಾರ್ ತಡೀತಾರೆ ನೊಡೋಣ’; ಡಿ.ಕೆ. ಶಿವಕುಮಾರ್ ಸವಾಲ್!

ಮುಂಬೈ; ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರು ಉಳಿದುಕೊಂಡಿರುವ ಮುಂಬೈನ ರಿನೈಸೆನ್ಸ್ ಹೊಟೇಲ್ ಬುಧವಾರ ದೊಡ್ಡ ಹೈ ಡ್ರಾಮಗೆ ಕಾರಣವಾಗಿದೆ. ಇಂದು ಬೆಳಗ್ಗೆಯೇ ಹೋಟೆಲ್ಗೆ ತೆರಳಿರುವ ಸಚಿವ ಡಿ.ಕೆ. ಶಿವಕುಮಾರ್ಹೊಟೇಲ್ ಒಳಗೆ ಹೋಗೋದು ಹೋಗೋದೆ, ಆದ್ಯಾರ್ ತಡೀತಾರೆ ನೋಡೋಣಎಂದು ಪೊಲೀಸರಿಗೆ ಸವಾಲು ಹಾಕಿದ್ದಾರೆ.

ಡಿ.ಕೆ. ಶಿವಕುಮಾರ್ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಬುಧವಾರ ಬೆಳಗ್ಗೆ ಮುಂಬೈಗೆ ಆಗಮಿಸಲಿದ್ದಾರೆ ಎಂಬ ವಿಚಾರ ತಿಳಿದ ತಕ್ಷಣ ಮಂಗಳವಾರ ರಾತ್ರಿಯೇ ಎಲ್ಲಾ ಶಾಸಕರು ತಮಗೆ ಸಿಎಂ ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಅವರಿಂದ ಬೆದರಿಕೆ ಇದೆ. ಹೀಗಾಗಿ ಅವರನ್ನು ಭೇಟಿ ಮಾಡಲು ಇಚ್ಚೆ ಇಲ್ಲ ಎಂದು ಮುಂಬೈ ಪೊಲೀಸ್ ಕಮಿಷನರ್​ಗೆ ದೂರು ನೀಡಿದ್ದರು. ಹೀಗಾಗಿ ನಿನ್ನೆ ರಾತ್ರಿಯಿಂದಲೇ ರಿನೈಸೆನ್ಸ್ ಹೋಟೆಲ್ ಎದುರು ಸುಮಾರು 2 ಸಾವಿರ ಪೊಲೀಸರನ್ನು ನೇಮಿಸಿ ಬಿಗಿ ಭದ್ರತೆ ನೀಡಲಾಗಿತ್ತು.

ನಿರೀಕ್ಷೆಯಂತೆಯೇ ಇಂದು ಬೆಳಗ್ಗೆ ಡಿಕೆಶಿ ಅತೃಪ್ತ ಶಾಸಕರು ತಂಗಿರುವ ಹೋಟೆಲ್ ಎದುರು ಬಂದಿದ್ದರು. ಆದರೆ, ಪೊಲೀಸರು ಅವರನ್ನು ಹೋಟೆಲ್ ಒಳಗೆ ಪ್ರವೇಶಿಸಲು ಅನುಮತಿಸಿರಲಿಲ್ಲ. ಹೀಗಾಗಿ ಡಿಕೆಶಿ ಹಾಗೂ ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, “ಇಲ್ಲಿಗೆ ನಾನು ಕಾಫಿ ಕುಡಿಯಲು ಬಂದಿಲ್ಲ. ರೂಮ್ ಬುಕ್ ಮಾಡಿ ಉಳಿಯಲು ಬಂದಿದ್ದೇನೆ. ಬೆಳಗ್ಗೆಯಿಂದ ಮುಖ ಸಹ ತೊಳೆದಿಲ್ಲ. ಮಳೆ ಬಂದರೂ ಇಲ್ಲಿಂದ ಕದಲಲ್ಲ. ಹೀಗಾಗಿ ಹೋಟೆಲ್ ಒಳಗೆ ಹೋಗಿಯೇ ಹೋಗ್ತೀನಿ, ಅದ್ಯಾರು ತಡೀತಾರೆ ನೋಡ್ತೀನಿ. ಏನೇ ಆದ್ರೂ ಅತೃಪ್ತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿಯೇ ಸಿದ್ಧ” ಎಂದು ಸವಾಲು ಹಾಕಿದ್ದಾರೆ.

ಆದರೆ, ಹೋಟೆಲ್ ಒಳಗೆ ಪ್ರವೇಶಿಸಲು ಡಿ.ಕೆ. ಶಿವಕುಮಾರ್ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, ಅತೃಪ್ತ ಸಚಿವರು ಹೋಟೆಲ್​ನ ಹಿಂಬದಿ ಗೇಟ್​ನ ಮೂಲಕ ಬೇರೆಡೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

ಅತೃಪ್ತ ಶಾಸಕರ ಮನವೊಲಿಸಿ ಬೆಂಗಳೂರಿಗೆ ಕರೆತರಲು ಡಿ.ಕೆ. ಶಿವಕುಮಾರ್ ಜೊತೆಗೆ ಜಿ.ಟಿ. ದೇವೇಗೌಡ ಸಹ ಮುಂಬೈಗೆ ತೆರಳಿದ್ದಾರೆ. ಆದರೆ, ಇವರನ್ನು ಹೋಟೆಲ್ ಒಳಗೆ ಪ್ರವೇಶಿಸಲು ಪೊಲೀಸರು ಬಿಡುತ್ತಿಲ್ಲ. ಇದರಿಂದ ಅಸಮಾಧಾನಗೊಂಡ ಜಿ.ಟಿ. ದೇವೇಗೌಡ, “ಮುಂಬೈನಲ್ಲಿ ಎಮರ್ಜೆನ್ಸಿ ಘೋಷಿಸಲಾಗಿದೆ.

ನಾವು ಬರುವುದನ್ನು ತಿಳಿದು ಇಷ್ಟು ಸಂಖ್ಯೆಯ ಪೊಲೀಸರನ್ನು ಹೋಟೆಲ್ ಎದುರು ನಿಲ್ಲಿಸಿರುವುದು ಸರಿಯಲ್ಲ” ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ