ಬೆಂಗಳೂರು: ಶಾಸಕರರಾಜೀನಾಮೆ ಸದ್ಯ ಅಂಗೀಕಾರ ಆಗುವುದಿಲ್ಲ ಎಂಬುದನ್ನು ಅರಿತ ಬಿಜೆಪಿ, ಸರ್ಕಾರ ರಚಿಸಲು ಅಗತ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಹುಡುಕುತ್ತಿದೆ.
ಮೈತ್ರಿ ಸರ್ಕಾರಕ್ಕೆ ಸಂಖ್ಯಾಬಲ ಇಲ್ಲದಿದ್ದರೂ ಶಾಸಕರ ರಾಜೀನಾಮೆ ಅಂಗೀಕಾರ ಆಗುವವರೆಗೆ ಬಿಜೆಪಿ ಕಾಯಲೇಬೇಕಾಗಿದೆ. ಹೀಗಾಗಿ ರಾಜೀನಾಮೆ ಅಂಗೀಕಾರಕ್ಕೆ ಎಲ್ಲ ಮಾರ್ಗಗಳನ್ನೂ ಬಿಜೆಪಿ ಸೃಷ್ಟಿಸುತ್ತಿದ್ದು, ಸಂದರ್ಭಕ್ಕೆ ತಕ್ಕಂತೆ ದಾಳ ಉರುಳಿಸಲು ಯೋಜನೆ ರೂಪಿಸಿದೆ. ಮೈತ್ರಿ ನಾಯಕರ ತಂತ್ರಗಳಿಗೆ ಪ್ರತಿ ತಂತ್ರ ಒಡ್ಡಲು ಬಿಜೆಪಿ ತಯಾರಿ ಮಾಡಿಕೊಂಡಿದೆ.
ಕಾನೂನು ಮಾರ್ಗ, ಶಾಸಕರ ರಾಜೀನಾಮೆಯನ್ನು ಬೇಗ ಅಂಗೀಕರಿಸುವಂತೆ ಒತ್ತಡ ಹೇರುವುದು, ಕೇಂದ್ರದ ನೆರವು, ರಾಜ್ಯಪಾಲರ ಮೇಲೆ ಒತ್ತಡ, ಮೈತ್ರಿ ಪಕ್ಷಗಳ ಅತೃಪ್ತ ಶಾಸಕರ ಮೇಲಿನ ಹಿಡಿತ ಕಾಯ್ದುಕೊಳ್ಳುವ ಮೂಲಕ ಅತೃಪ್ತರು ಕೈ ಜಾರದಂತೆ ನಿಗಾ ವಹಿಸುವುದು, ಮೈತ್ರಿ ನಾಯಕರ ತಂತ್ರಗಳಿಗೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ರೀತಿಯ ತಂತ್ರಗಳನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ತಿಳಿದು ಬಂದಿದೆ.
ಸದ್ಯ ರಾಜೀನಾಮೆ ನೀಡಿರುವ 13 ಅತೃಪ್ತರು ನಮ್ಮ ಪಕ್ಷವನ್ನು ಸೇರಲಿದ್ದಾರೆ ಎನ್ನುವುದನ್ನು ಬಿಜೆಪಿ ನಂಬಿಲ್ಲ. ಹೀಗಾಗಿ ಮೈತ್ರಿ ಪಕ್ಷಗಳ ಅತೃಪ್ತರ ಪೈಕಿ ನಂಬಿಕಸ್ತ ಶಾಸಕರು ಯಾರು ಎಂದು ಪತ್ತೆ ಹಚ್ಚುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದು ಸ್ಪಷ್ಟವಾಗಿ ತಿಳಿಯಬೇಕಾದರೆ ಅಧಿವೇಶನದವರೆಗೆ ಕಾಯಬೇಕು. ಹೀಗಾಗಿ ಬಿಜೆಪಿ ನಾಯಕರು ಅಧಿವೇಶನದವರೆಗೆ ತಟಸ್ಥವಾಗಿ ಉಳಿಯಲು ಮುಂದಾಗಿದ್ದಾರೆ.
ಬಹುಮತ ಸಾಬೀತುಪಡಿಸುವ ದಿನ ಯಾವ ಶಾಸಕರು, ಯಾರ ಪರ ಇದ್ದಾರೆ ಎಂಬುದನ್ನು ತಿಳಿದು ಅವರನ್ನಷ್ಟೇ ಪಕ್ಷಕ್ಕೆ ಸೇರ್ಪಡೆಗೊಳಿಸಲು ಬಿಜೆಪಿ ಮುಂದಾಗಿದೆ. ಎರಡು ಬಾರಿ ಆಪರೇಷನ್ ಕಮಲ ಪ್ರಯತ್ನ ವಿಫಲವಾದ ಹಿನ್ನೆಲೆ ಬಿಜೆಪಿ ಈ ಬಾರಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನೂ ಅನುಸರಿಸಿ ಪ್ಲಾನ್ ವಿಫಲವಾಗದಂತೆ ಎಚ್ಚರಿಕೆಯಿಂದ ಹೆಜ್ಜೆಯನ್ನಿಡುತ್ತಿದೆ ಎಂದು ತಿಳಿದು ಬಂದಿದೆ.