ಈಗಲಾದರೂ ಸ್ಪೀಕರ್‍ರವರು ಕಾನೂನುಬದ್ದವಾಗಿ ಕೆಲಸ ಮಾಡಬೇಕು-ಬಿಜೆಪಿ ಮುಖಂಡ ಯಡಿಯೂರಪ್ಪ

ಬೆಂಗಳೂರು, ಜು.10- ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಈಗಲಾದರೂ ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ಶಾಸಕರು ಸ್ವಯಂಪ್ರೇರಿತರಾಗಿ ನೀಡಿರುವ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‍ಕುಮಾರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಈವರೆಗೂ ಅವರು ಎಳ್ಳಷ್ಟೂ ಸಂಶಯಕ್ಕೆ ಅನುಮಾನವಿಲ್ಲದೆ ಸ್ಪೀಕರ್ ಹುದ್ದೆಯನ್ನು ನಿಭಾಯಿಸಿದ್ದಾರೆ. ಮುಂದೆಯೂ ಕೂಡ ಅವರಿಂದ ಅದನ್ನೇ ನಿರೀಕ್ಷೆ ಮಾಡುತ್ತೇವೆ ಎಂದು ಹೇಳಿದರು.

ಶಾಸಕರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುತ್ತೇವೆಂದು ಹೇಳಿರುವಾಗ ಅದನ್ನು ವಿಳಂಬ ಮಾಡುವುದು ಇಲ್ಲವೆ ಕ್ರಮಬದ್ಧವಾಗಿಲ್ಲ ಎಂದು ಹೇಳುವುದು ಸರಿಯಲ್ಲ. ಕೂಡಲೇ ಶಾಸಕರ ರಾಜೀನಾಮೆ ಅಂಗೀಕರಿಸಿ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆ ಕೊನೆಗಾಣಿಸಲಿ ಎಂದು ಮನವಿ ಮಾಡಿದರು.

ಎಲ್ಲಾ ಪಕ್ಷದವರೂ ಸರ್ವಾನುಮತದಿಂದ ಕೆ.ಆರ್.ರಮೇಶ್‍ಕುಮಾರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದ್ದೇವೆ. ಆದರೆ, ಅವರು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿಲ್ಲ. ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲು ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕ್ರಮಬದ್ಧವಲ್ಲದ ರಾಜೀನಾಮೆ ನೀಡಿದವರು ಮತ್ತೊಮ್ಮೆ ಬಂದು ಸರಿಯಾದ ಮಾದರಿಯಲ್ಲಿ ರಾಜೀನಾಮೆ ಸಲ್ಲಿಸುತ್ತಾರೆ. ಆದರೆ, ರಾಜೀನಾಮೆಗಳು ಕ್ರಮಬದ್ಧವಾಗಿವೆ ಎಂದು ಅವರೇ ಹೇಳಿರುವ ರಾಜೀನಾಮೆಗಳನ್ನಾದರೂ ಕೂಡಲೇ ಕಾನೂನು ಬದ್ಧವಾಗಿ ಅಂಗೀಕಾರ ಮಾಡಲಿ ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ನಮ್ಮ ಪಕ್ಷದ 105 ಶಾಸಕರು ಇಂದು ಧರಣಿ ನಡೆಸುತ್ತೇವೆ. ಮಧ್ಯಾಹ್ನ 3 ಗಂಟೆಗೆ ಸ್ಪೀಕರ್ ಅವರ ಭೇಟಿಗೆ ಸಮಯ ಕೋರಿದ್ದೇವೆ. ಅಷ್ಟರೊಳಗೆ ರಾಜ್ಯಪಾಲರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇವೆ. ನಂತರ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದೇವೆ ಎಂದು ತಿಳಿಸಿದರು.

ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಸಚಿವ ಕೃಷ್ಣಭೆರೇಗೌಡ ಸೇರಿದಂತೆ ಇತರೆ ಸಚಿವರ ಜತೆಗೆ ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಕುರಿತು ಮಾತನಾಡಿದ ಯಡಿಯೂರಪ್ಪ, ಸ್ಪೀಕರ್ ಅವರು ರವಿವರ್ಮ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಳ್ಳಬಹುದಿತ್ತು. ಆದರೆ, ಅವರೇ ರವಿವರ್ಮ ಅವರನ್ನು ಭೇಟಿ ಮಾಡಿದ್ದು ಸರಿಯಲ್ಲ. ಈ ಕುರಿತು ಅವರೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಡಿಕೆಶಿ ವಿರುದ್ಧ ಅಸಮಾಧಾನ: ಡಿ.ಕೆ.ಶಿವಕುಮಾರ್ ವಿರುದ್ಧ ಕೆಂಡ ಕಾರಿದ ಯಡಿಯೂರಪ್ಪ, ಅತೃಪ್ತ ಶಾಸಕರನ್ನು ಮುಂಬೈಗೆ ತೆರಳಿ ಭೇಟಿ ಮಾಡುವುದು, ಮಾತುಕತೆ ನಡೆಸುವುದು ಡಿ.ಕೆ. ಶಿವಕುಮಾರ್ ಹಾಗೂ ಅವರ ಪಕ್ಷದ ಶಾಸಕರ ನಡುವಿನ ವಿಚಾರ. ಈ ಕುರಿತು ನಮ್ಮ ತಕರಾರಿಲ್ಲ. ಆದರೆ, ಸ್ಪೀಕರ್ ಕಚೇರಿ ಒಳಗೆ ನುಗ್ಗಿ ರಾಜೀನಾಮೆ ಸ್ವೀಕೃತಿ ಪತ್ರ ಹರಿದುಹಾಕುವುದು ಎಷ್ಟು ಸರಿ. ಈ ಕುರಿತು ಸ್ಪೀಕರ್ ಈವರೆಗೆ ಏಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ