ಬೆಂಗಳೂರು, ಜು.10- ಅಧಿಕ ದಂಡ ವಿಧಿಸುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರು ಟೌನ್ ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಬಿಎಂಟಿಸಿ ನಂತರ ಎರಡನೇ ಸ್ಥಾನದಲ್ಲಿ ನಾವು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಹಲವಾರು ವರ್ಷಗಳಿಂದ ಐಕ್ಯ ಹೋರಾಟ ಸಮಿತಿಯಿಂದ ಚಾಲಕರ ಪರವಾಗಿ ವಿವಿಧ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ರಸ್ತೆ ಸುರಕ್ಷತೆ ಕಾಯ್ದೆ ತಿದ್ದುಪಡಿ ಹೆಸರಿನಲ್ಲಿ ದುಬಾರಿ ದಂಡ ವಿಧಿಸುತ್ತಿವೆ ಇದು ಸರಿಯಲ್ಲ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಮಿತಿಮೀರಿದ ವೇಗದ ಚಾಲನೆಗೆ 500ರೂ.ಇದ್ದ ದಂಡವನ್ನು 1000ರೂ.ಗೆ ಏರಿಸಲಾಗಿದೆ.ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ ಮೊದಲನೇ ಬಾರಿಗೆ 100ರೂ.ಇದ್ದದನ್ನು 1000ರೂ.ಗೆ ಎರಡನೇ ಬಾರಿಗೆ 2000ರೂ.ಗೆ ಏರಿಸಲಾಗಿದೆ. ನೋಂದಣಿಯಿಲ್ಲದ ವಾಹನ ಚಲಾವಣೆ ಮಾಡಿದರೆ ಮೊದಲ ಬಾರಿಗೆ 100ರೂ.ಇದ್ದುದನ್ನು ಈಗ 5000ರೂ. ಮಾಡಲಾಗಿದೆ. ಎರಡನೇ ಬಾರಿಗೆ 300ರೂ.ಇದ್ದುದನ್ನು 10,000ರೂ.ಮಾಡಲಾಗಿದೆ. ನಾವು ಬೇಕೆಂದು ನಿಯಮ ಉಲ್ಲಂಘಿಸುವುದಿಲ್ಲ. ತೀರಾ ಅನಿವಾರ್ಯ ಇದ್ದಾಗ ಒಮ್ಮೊಮ್ಮೆ ಉಲ್ಲಂಘನೆಯಾಗಿರುತ್ತದೆ. ಹಾಗೆಂದು ದುಬಾರಿ ದಂಡ ವಿಧಿಸಿದರೆ ನಾವು ಬದುಕುವುದು ಹೇಗೆಂದು ಸಮಿತಿಯ ಅಧಕ್ಷ ಜವರೆಗೌಡ, ಕಾರ್ಯಧ್ಯಕ್ಷ ಎಂ.ವೆಂಕಟೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ರಸ್ತೆಗಳ ಅಗಲೀಕರಣ ಮಾಡದೇ ಇರುವುದರಿಂದ ಕೆಲವು ಕಡೆ ವಾಹನ ನಿಲ್ದಾಣಕ್ಕೆ ಸ್ಥಳಯಿಲ್ಲ. ದಿನನಿತ್ಯ ಸಂಚಾರ ದಟ್ಟನೆ ಇರುತ್ತದೆ.
ಸರ್ಕಾರಗಳಿಗೆ ಸಾರ್ವಜನಿಕರ ಹಿತದೃಷ್ಟಿಯಿಲ್ಲ, ಚಾಲಕರಿಗೆ ಯಾವುದೇ ರೀತಿಯ ಸೌಲಭ್ಯವನ್ನು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಅಧಿಕ ದಂಡ ವಿಧಿಸಿರುವುದನ್ನು ಹಿಂಪಡೆಯಬೇಕು. ಆಟೋ ಚಾಲಕರಿಗೆ ಆರ್‍ಟಿಒ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಕಿರುಕುಳ ನೀಡಬಾರದೆಂದು ಜವರೇಗೌಡ ಮನವಿ ಮಾಡಿದರು.