ಪೋರ್ಟ್ ಮೊರ್ಸೆಬೆ, ಜು.10– ಪಪುವಾ ನ್ಯೂ ಗಿನಿ ದ್ವೀಪದಲ್ಲಿ ಬುಡಕಟ್ಟು ಸಮುದಾಯದ ಜನರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಇಬ್ಬರು ಗರ್ಭಿಣಿಯರೂ ಸೇರಿದಂತೆ 26 ಮಂದಿ ಹತರಾಗಿದ್ದು, ಅನೇಕರು ಗಾಯಗೊಂಡಿದ್ಧಾರೆ.
ದೇಶದ ಪಶ್ಚಿಮ ಪ್ರಾಂತ್ಯದ ಹೆಲಾ ಪ್ರದೇಶದಲ್ಲಿ ಎರಡು ಬುಡಕಟ್ಟು ಕೋಮಿನ ನಡುವೆ ಕಳೆದ ಮೂರು ದಿನಗಳಿಂದ ನಡೆದ ಘರ್ಷಣೆಯಲ್ಲಿ ಕನಿಷ್ಟ 26 ಮಂದಿ ಹತ್ಯೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯದ ಎತ್ತರದ ಪ್ರದೇಶಗಳ ಪ್ರಾಬಲ್ಯ ಸಾಧಿಸಲು ಎರಡು ಬುಡಕಟ್ಟು ಕೋಮಿನ ಜನರ ನಡುವೆ ಘರ್ಷಣೆ ಮತ್ತು ಹಿಂಸಾಚಾರ ಭುಗಿಲೆದ್ದಿತು. ಬುಡಕಟ್ಟು ಜನರ ಕಳ್ಳಸಾಗಣೆ ಮೂಲಕ ತಂದಿದ್ದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಘರ್ಷಣೆ ಮತ್ತಷ್ಟು ಭೀಕರವಾಯಿತು ಎಂದು ಅಧಿಕಾರಿಗಳು ಆತಂಕದಿಂದ ನುಡಿದಿದ್ದಾರೆ.
ಶತಮಾನಗಳಿಂದಲೂ ಈ ಪ್ರಾಂತ್ಯದಲ್ಲಿ ಕಾನೂನು ಕಟ್ಟಲೆ ಎಂಬುದು ಜಾರಿಯಲ್ಲಿಲ್ಲ. ಬುಡಕಟ್ಟು ಜನರ ತಮ್ಮದೇ ಆದ ಜಂಗಲ್ ರಾಜ್ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಪದೇ ಪದೇ ಘರ್ಷಣೆ, ಹಿಂಸಾಚಾರ ಮತ್ತು ಹತ್ಯಾಕಾಂಡಗಳು ಮಾಮೂಲಿ ಸಂಗತಿಯಾಗಿವೆ.
ಈ ಪ್ರಾಂತ್ಯದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಳ್ಳುವುದನ್ನು ತಡೆಯಲು ಸ್ಥಳೀಯ 40 ಅಧಿಕಾರಿಗಳೊಂದಿಗೆ 100ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಲಾಗಿದೆ.
ಈ ನರಮೇಧದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಪುವಾ ನ್ಯೂ ಗಿನಿ ಪ್ರಧಾನಮಂತ್ರಿ ಜೇಮ್ಸ್ ಮರಪೆ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಮತ್ತು ಹಿಂಸಾಚಾರ ಮರುಕಳಿಸದಂತೆ ತಡೆಯುವುದಾಗಿ ತಿಳಿಸಿದ್ದಾರೆ.