ಬೆಂಗಳೂರು,ಜು.9- ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಇಂದು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ, ಮಾಜಿ ಸ್ಪೀಕರ್ ಜೊತೆ ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದಾರೆ.
ಬೆಳಗ್ಗೆ ಎಂದಿನಂತೆ ವಾಕಿಂಗ್ ಮುಗಿಸಿಕೊಂಡು ಬಂದ ಯಡಿಯೂರಪ್ಪ ನಂತರ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಅವರನ್ನು ಕರೆಸಿಕೊಂಡು, ಸ್ಪೀಕರ್ ನಡೆ ನಂತರ ಮುಂದೇನು ಎನ್ನುವ ಕುರಿತು ಕಾನೂನು ವ್ಯಾಪ್ತಿಯ ಅವಕಾಶಗಳ ಕುರಿತ ಚರ್ಚೆ ನಡೆಸಿದರು ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೋಪಯ್ಯ ಜೊತೆ ಬಿಎಸ್ವೈ ಸಮಾಲೋಚನೆ ನಡೆಸುತ್ತಿದ್ದು, ಬೋಪಯ್ಯ ಜೊತೆ ಹಿರಿಯ ನಾಯಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮತ್ತು ಮಾಧುಸ್ವಾಮಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಸ್ಪೀಕರ್ ನಡೆ ನಂತರ ಮುಂದೇನು ಎನ್ನುವ ಕುರಿತು ಕಾನೂನು ವ್ಯಾಪ್ತಿಯ ಅವಕಾಶಗಳ ಕುರಿತ ಚರ್ಚೆ ನಡೆಸಿದ್ದು, ಮುಂದಿನ ನಡೆಗಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಂದ ಕೂಡ ಸಲಹೆ ಪಡೆಯಲಾಗಿದೆ.
ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಧೋರಣೆ ಅನುಸರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜಭವನದ ಕದ ತಟ್ಟುವುದು, ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ಸೇರಿದಂತೆ ಇತರೆ ಆಯ್ಕೆ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಈ ಹಿಂದೆ ಸ್ಪೀಕರ್ ಆಗಿದ್ದ ಕೆ.ಜಿ ಬೋಪಯ್ಯ ಅವರ ಅನುಭವದ ಆಧಾರದಲ್ಲಿ ಮುಂದಿರುವ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಯಿತು. ಸಂಜೆ ಶಾಸಕಾಂಗ ಪಕ್ಷದ ಸಭೆ ಇದ್ದು, ಸ್ಪೀಕರ್ ನಿರ್ಧಾರದ ನಂತರ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ಸಭೆ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.