ಭನ್ನಮತೀಯರಿಗೆ ಭಾರಿ ಹಿನ್ನಡೆಯಾದ ಸ್ಪೀಕರ್ ತಿರ್ಮಾನ

ಬೆಂಗಳೂರು, ಜು.9- ನನ್ನನ್ನು ಖುದ್ದು ಭೇಟಿಯಾಗಿ ರಾಜೀನಾಮೆ ನೀಡುವವರೆಗೂ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎನ್ನುವ ಮೂಲಕ ಸರ್ಕಾರದ ವಿರುದ್ಧ ತೊಡೆತಟ್ಟಿ ರಾಜೀನಾಮೆ ನೀಡಿರುವ ಭಿನ್ನಮತೀಯರಿಗೆ ವಿಧಾನಸಭೆಯ ಸ್ಪೀಕರ್ ಮರ್ಮಾಘಾತ ನೀಡಿದ್ದಾರೆ.

ಇಂದು ತಾವು ನೀಡಿರುವ ರಾಜೀನಾಮೆ ಅಂಗೀಕಾರವಾಗಬಹುದೆಂಬ ನಿರೀಕ್ಷೆಯಲ್ಲಿದ್ದ 12 ಮಂದಿ ಭಿನ್ನಮತೀಯ ಶಾಸಕರಿಗೆ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ತೆಗೆದುಕೊಂಡಿರುವ ತೀರ್ಮಾನ ಭಾರೀ ಹಿನ್ನೆಡೆ ಉಂಟು ಮಾಡಿದೆ.

ನನ್ನ ಗೈರುಹಾಜರಿಯಲ್ಲಿ ಶಾಸಕರು ರಾಜೀನಾಮೆ ನೀಡಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಸಂಸದೀಯ ನಿಯಮಾವಳಿಯ ಪ್ರಕಾರ ಶಾಸಕರು ಖುದ್ದು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಬೇಕೆಂಬ ನಿಯಮವಿದೆ. ನಾನು ಕೂಡ ಇದನ್ನೇ ಪರಿಪಾಲನೆ ಮಾಡುತ್ತೇನೆ. ಯಾವುದೇ ಶಾಸಕರ ರಾಜೀನಾಮೆಯನ್ನು ತುರ್ತಾಗಿ ಅಂಗೀಕಾರ ಮಾಡುವ ಪ್ರಮೇಯವಿಲ್ಲ ಎಂದು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ಶನಿವಾರ 12 ಮಂದಿ ಶಾಸಕರು ರಾಜೀನಾಮೆ ಪತ್ರವನ್ನು ನನ್ನ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ. ನನಗೆ ಯಾವುದೇ ಶಾಸಕರು ಭೇಟಿಯಾಗಲು ಸಮಯಾವಕಾಶ ಕೋರಿರಲಿಲ್ಲ. ನಾನು ಇಲ್ಲದಿದ್ದಾಗ ರಾಜೀನಾಮೆ ನೀಡಿದರೆ ಅದಕ್ಕೂ ನನಗೂ ಏನು ಸಂಬಂಧ ಎಂದು ರಮೇಶ್‍ಕುಮಾರ್ ಪ್ರಶ್ನಿಸಿದರು.

ಎಷ್ಟು ಮಂದಿ ರಾಜೀನಾಮೆ ನೀಡಿದ್ದಾರೋ ಅವರೆಲ್ಲರೂ ಖುದ್ದು ಭೇಟಿಯಾಗಲೇಬೇಕು ಅಲ್ಲಿಯವರೆಗೂ ನಾನು ಅಂಗೀಕಾರ ಮಾಡುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ ನಾನು ಆತುರಾತುರವಾಗಿ ಅಂಗೀಕಾರ ಮಾಡಬೇಕೆಂದು ನೀವೇಕೆ ನಿರೀಕ್ಷೆ ಮಾಡುತ್ತೀರಿ ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು.

ನಾನು ಇಡುವ ಪ್ರತಿಯೊಂದು ಹೆಜ್ಜೆ ಇತಿಹಾಸವಾಗಲಿದೆ. ಹಾಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ನನಗೆ ಯಾವ ನಾಯಕರೂ ಇಲ್ಲ. ನನ್ನ ನಾಯಕ ಸಂವಿಧಾನ ಮತ್ತು ಜನರು. ಅದರಡಿ ನಾನು ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ರಾಜಕೀಯ ಎಂದರೆ ಕೊಳಚೆ ಪ್ರದೇಶದಲ್ಲಿ ನಿಂತು ವಾಸನೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ.

ಹಾಗಾಗಿ ರಾಜಕೀಯ ಎಂಬ ಕೊಳಚೆ ಪ್ರದೇಶದಲ್ಲಿರುವ ನಾನು ಎಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಂಡು ಹೋಗಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕರ ರಾಜೀನಾಮೆ ಅತ್ಯಂತ ಕೆಟ್ಟ ಬೆಳವಣಿಗೆ. ಜನ ಸಾಮಾನ್ಯರಿಗೆ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವ ಅರ್ಧ ಭಾಗದ ಅಧಿಕಾರವನ್ನು ಅಷ್ಟೇ ನೀಡಿದ್ದೇವೆ.

ಸರಿಯಾಗಿ ಕೆಲಸ ಮಾಡದಿದ್ದಾಗ ಅವರನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಅವರಿಗಿಲ್ಲ. ಶಾಸಕರನ್ನು ಆರಿಸಿಕಳುಹಿಸುವುದು ಜನಸಾಮಾನ್ಯರು. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಜನರ ಅಭಿಪ್ರಾಯ ಆಲಿಸುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ನಾನು ಜನಸಾಮಾನ್ಯರ ಅಭಿಪ್ರಾಯ ಕೇಳುತ್ತೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಮದುವೆಯಂತಾಗಿದೆ. ಮದುವೆಯಲ್ಲಿ ತಾಳಿ ಕಟ್ಟುವುದು, ಪುರೋಹಿತ ಹೇಳಿದ ಮಂತ್ರ ಅರ್ಥ ಮಾಡಿಕೊಳ್ಳುವುದು ಪ್ರಮುಖವಾಗಬೇಕು. ಆದರೆ ವಾದ್ಯ, ತಾಳಮೇಳ ಅಡುಗೆಯವರೇ ಮದುವೆಯಲ್ಲಿ ಪ್ರಮುಖರಾಗುತ್ತಿದ್ದಾರೆ. ಮದುವೆಗೆ ಬಂದ ಜನ ವರ ತಾಳಿ ಕಟ್ಟಿದ್ದನಾ , ಪುರೋಹಿತರ ಮಂತ್ರ ಅರ್ಥವಾಯಿತೋ ಇಲ್ಲವೋ ಎಂಬ ಯಾವುದನ್ನೂ ಗಮನಿಸುವುದಿಲ್ಲ. ಅಕ್ಷತೆ ಹಾಕುವಷ್ಟು ವ್ಯವಧಾನ ಜನರಿಗಿಲ್ಲ. ತಾಳಮೇಳಗಳ ಸದ್ದೆ ಜಾಸ್ತಿಯಾಗಿರುತ್ತದೆ. ಆಡಂಬರವೇ ಹೆಚ್ಚಾಗಿದ್ದು, ಸಂಪ್ರದಾಯದ ಮದುವೆ ನಶಿಸಿ ಹೋಗಿದೆ. ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ವಿಧಾನಮಂಡಲದ ಚರ್ಚೆಗಳು ನಗಣ್ಯವಾಗುತ್ತಿವೆ. ಜನಸಾಮಾನ್ಯರ ಸಮಸ್ಯೆಗಳಿಗಿಂತಲೂ ರಾಜಕೀಯ ಚರ್ಚೆಗಳೇ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.

ಶಾಸಕರ ರಾಜೀನಾಮೆ ವಿಷಯದಲ್ಲಿ ಕಾನೂನಾತ್ಮಕವಾಗಿ ಜನಸಾಮಾನ್ಯರ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೇಳಿದಂತೆ ನಡೆದುಕೊಳ್ಳುವುದು ನನ್ನ ಹವ್ಯಾಸ. ಶನಿವಾರ 11.30ರವರೆಗೆ ಕಚೇರಿಯಲ್ಲಿದ್ದೆ. ನಾನು ಹೊರಟ ಮೇಲೆ ಶಾಸಕರು ಕಚೇರಿಗೆ ಬಂದಿದ್ದಾರೆ. ಅದಕ್ಕೂ ಮೊದಲು ಯಾರು ನನ್ನನ್ನು ಸಂಪರ್ಕಿಸಿರಲಿಲ್ಲ. ರಾಜೀನಾಮೆ ಸಲ್ಲಿಸುವುದಾಗಿ ಹೇಳಿರಲಿಲ್ಲ. ಯಾವುದೇ ಮಾಹಿತಿ ಇಲ್ಲದೆ ಇರುದುದ್ದರಿಂದ ಅನ್ಯ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದೆ.

ಆನಂತರ ಶಾಸಕರು ಆಗಮಿಸಿದ್ದು, ಅವರ ರಾಜೀನಾಮೆಯನ್ನು ತೆಗೆದುಕೊಂಡು ಸ್ವೀಕೃತಿ ಪತ್ರ ವನ್ನು ನನ್ನ ಆಪ್ತ ಸಹಾಯಕರಿಗೆ ನೀಡುವಂತೆ ಸೂಚನೆ ನೀಡಿದ್ದೆ. ಅದರಂತೆ ಅವರು ನಡೆದುಕೊಂಡಿದ್ದಾರೆ. ಈಗ ಕಚೇರಿಗೆ ಹೋಗುತ್ತೇನೆ. ರಾಜೀನಾಮೆ ಪತ್ರಗಳನ್ನು ಪರಿಶೀಲಿಸುತ್ತೇನೆ. ಅದೇ ಸಂದರ್ಭಗಳಲ್ಲಿ ಬೇರೆ ಬೇರೆ ಆಕ್ಷೇಪಗಳು, ದೂರುಗಳು ಬಂದಿದ್ದರೆ ಅವುಗಳನ್ನೂ ಪರಿಶೀಲಿಸುವುದಾಗಿ ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ