ಮುಂಬೈ, ಜು. 8- ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮೈತ್ರಿಪಕ್ಷಗಳು ಹೆಣಗಾಡುತ್ತಿವೆ. ಈ ನಡುವೆ ರಾಜ್ಯದ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಶಿವಸೇನೆ ಕಳೆದ 13 ತಿಂಗಳ ಹಿಂದೆಯೇ ಭವಿಷ್ಯ ನುಡಿದಿತ್ತು.
ಕರ್ನಾಟಕ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ, ಅದು ಪತನವಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಈ ಸರ್ಕಾರದ ಪತನವನ್ನು ಊಹಿಸಲಾಗಿತ್ತು. ಕರ್ನಾಟಕದಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದೆ. ಕುಮಾರಸ್ವಾಮಿಯ ಬೆಂಬಲದೊಂದಿಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ. ಆದರೆ ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳು ಹೆಚ್ಚು ದಿನ ಬಾಳುವುದಿಲ್ಲ ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯ ಲೇಖನದಲ್ಲಿ ಹೇಳಿಕೊಂಡಿದೆ.
ಜುಲೈ 6 ರಂದು ರಾಜ್ಯ ವಿಧಾನಸಭೆಯ 11 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ರಾಜ್ಯದ ಸಮ್ಮಿಶ್ರ ಸರ್ಕಾರ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಕರ್ನಾಟಕದಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಬಲ 105 ಕ್ಕೆ ಇಳಿದಿದೆ, ಬಹುಮತಕ್ಕೆ ಅಗತ್ಯವಾಗಿರುವ 113 ಮ್ಯಾಜಿಕ್ ಸಂಖ್ಯೆಗಿಂತ ಎಂಟು ಸ್ಥಾನ ಕಡಿಮೆಯಾಗಿದೆ.