ಬೆಂಗಳೂರು, ಜು.9- ರಾಜೀನಾಮೆ ನೀಡಿರುವ ಒಂಬತ್ತು ಮಂದಿ ಶಾಸಕರು ಹಾಗೂ ರಾಜೀನಾಮೆ ನೀಡದ ಏಳು ಮಂದಿ ಶಾಸಕರು ಸೇರಿದಂತೆ ಒಟ್ಟು 16 ಮಂದಿ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದು, ಕಾಂಗ್ರೆಸ್‍ನ ಆತಂಕವನ್ನು ಹೆಚ್ಚಿಸಿದೆ.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ತೀವ್ರಗೊಂಡ ಬೆನ್ನಲ್ಲೇ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಇಂದು ತುರ್ತು ಶಾಸಕಾಂಗ ಸಭೆಯನ್ನು ಕರೆದಿತ್ತು.
ಅದರಲ್ಲಿ ಶೃಂಗೇರಿಯ ರಾಜೇಗೌಡ ಅವರು ತಾವು ನ್ಯಾಚೂರೋಪತಿ ಚಿಕಿತ್ಸೆ ಪಡೆಯುತ್ತಿದ್ದು ಸಭೆಯಲ್ಲಿ ಪಾಲ್ಗೊಳ್ಳಲು ಹಾಗುತ್ತಿಲ್ಲ ಎಂದು ಅನುಮತಿ ಪಡೆದರೆ, ಗುಲ್ಬರ್ಗ ಉತ್ತರ ಕ್ಷೇತ್ರದ ಕಲ್ಹಜಾ ಫಾತೀಮಾ ಅವರು ತಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಬೇಕಿರುವುದರಿಂದ ತಮಗೆ ಸಭೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದ ಡಾ.ಸುಧಾಕರ್, ಸಂಡೂರಿನ ಶಾಸಕ ಹಾಗೂ ಸಚಿವರಾದ ಇ.ತುಕರಾಂ, ಹೊಸಕೋಟೆ ಕ್ಷೇತ್ರದ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಅನಾರೋಗ್ಯದ ಕಾರಣಕ್ಕಾಗಿ ಭಾಗವಹಿಸಲಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹರಿಹರದ ಶಾಸಕ ರಾಮಪ್ಪ ಅನುಮತಿ ಪಡೆದು ಸಭೆಯಿಂದ ದೂರುಳಿದಿದ್ದಾರೆ.
ಹಿರಿಯ ಶಾಸಕರಾದ ರೋಷನ್‍ಬೇಗ್, ರಾಮಲಿಂಗಾರೆಡ್ಡಿ ಅವರುಗಳು ಯಾವುದೇ ಪೂರ್ವಾನುಮತಿ ಪಡೆಯದೆ ಗೈರು ಹಾಜರಾಗಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರು ವಿಳಂಬವಾಗಿ ಸಭೆಗೆ ಬಂದರೆ, ಖಾನಾಪುರ ಕ್ಷೇತ್ರದ ಅಂಜಲಿನಿಂಬಾಳ್ಕರ್, ಕಾಗವಾಡದ ಶೀಮಂತ ಕುಮಾರ್ ಪಾಟೀಲ್ ಅವರು ಶಾಸಕಾಂಗ ಸಭೆಗೆ ಬರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಇವರ ಜತೆಗೆ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಸ್ಕಿ ಕ್ಷೇತ್ರದ ಪ್ರತಾಪ್‍ಗೌಡ ಪಾಟೀಲ್, ಹಿರೆಕೇರೂರು ಕ್ಷೇತ್ರದ ಬಿ.ಸಿ.ಪಾಟೀಲ್, ಗೋಕಾಕ್‍ನ ರಮೇಶ್ ಜಾರಕಿಹೊಳಿ, ಯಲ್ಲಾಪುರದ ಶಿವರಾಂ ಹೆಬ್ಬಾರ್, ಅಥಣಿಯ ಮಹೇಶ್ ಕಮಟಳ್ಳಿ, ವಿಜಯನಗರದ ಆನಂದ್‍ಸಿಂಗ್, ಬೆಂಗಳೂರಿನ ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂ ಕ್ಷೇತ್ರದ ಬೈರತಿ ಬಸವರಾಜು, ರಾಜರಾಜೇಶ್ವರಿ ಕ್ಷೇತ್ರದ ಮುನಿರತ್ನ ಅವರುಗಳು ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದಾರೆ.
ಇಷ್ಟೂ ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಭೆಯ ಬಳಿಕ ಸ್ಪೀಕರ್ ಅವರಿಗೆ ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಗುಮಾನಿಗೆ ಕಾರಣರಾಗಿದ್ದ ಜಯನಗರ ಸೌಮ್ಯಾರೆಡ್ಡಿ, ಬಂಗಾರಪೇಟೆಯ ನಾರಾಯಣಸ್ವಾಮಿ ಅವರು ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದರು.